ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ಸಹಕಾರಿಯಾಗಿದೆ. ಮಕ್ಕಳು ನೂತನ ವೈಜ್ಞಾನಿಕ ಆವಿಷ್ಕಾರಗಳೆಡೆಗೆ ತೆರೆದುಕೊಳ್ಳುವಂತಹ ವಾತಾವರಣ ಮೂಡಿ ಬಂದಿದೆ ಎಂದು ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಸ್.ಸುಧಾಕರ್ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ತೀತ ಗ್ರಾಮದ ವಾಣಿ ವಿದ್ಯಾ ಸಮಿತಿ ಪ್ರೌಢಶಾಲೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊರಟಗೆರೆ ತಾಲ್ಲೂಕು ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಟಿ.ಶಿವಕುಮಾರ್ ಮಾತನಾಡಿ, ಖಾಸಗಿ ಶಾಲೆಯ ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲವೆಂಬಂತೆ ಕಾರ್ಯಕ್ರಮ ಕಳಸ ಪ್ರಾಯವಾಗಿದೆ. ಇಂತಹ ಸೃಜನಾತ್ಮಕ ಕಾರ್ಯಕ್ರಮಗಳು ಕ್ರಿಯಾಶೀಲ ಶಿಕ್ಷಕರಿಂದ ಮಾತ್ರ ಸಾಧ್ಯ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಜಾಗೃತಗೊಳಿಸಲಿದೆ ಮತ್ತು ಶಾಶ್ವತ ಕಲಿಕೆ ಉಂಟು ಮಾಡುತ್ತದೆ ಎಂದರು.
ತುಮಕೂರು ನಗರದ ವಿದ್ಯಾವಾಹಿನಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್.ಕುಮಾರಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಗುಣಮಟ್ಟದ ವಿಜ್ಞಾನ ಮಾದರಿಗಳನ್ನು ತಯಾರಿಸಿ ವಿಶ್ಲೇಷಿಸುವುದು ನಿಜಕ್ಕೂ ಅನುಕರಣೀಯವಾಗಿದೆ ಎಂದು ಆಯೋಜಕರನ್ನು ಅಭಿನಂದಿಸಿದರು ಮತ್ತು ಕಾರ್ಯಕ್ರಮದ ಸಂಘಟನೆಗಾಗಿ ಮಕ್ಕಳಿಗೆ 5 ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತರಗತಿವಾರು ಮೂರು ಮಕ್ಕಳಿಗೆ ಬಹುಮಾನಗಳನ್ನು ಪಾರಿತೋಷಕ ಮೆಡಲ್ ಗಳು ಮತ್ತು ಪ್ರಶಸ್ತಿ ಪತ್ರದೊಂದಿಗೆ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಸಿ ಪಿ ಆರ್ ಪರಿಸರ ಶಿಕ್ಷಣ ಸಂಸ್ಥೆಯ ಯೋಜನಾಧಿಕಾರಿ ಎಸ್ ರವಿಶಂಕರ್, ತುಮಕೂರು ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪಿ ಪ್ರಸಾದ್, ಐ.ಕೆ ಕಾಲೋನಿ ಪಬ್ಲಿಕ್ ಶಾಲೆಯ ವಿಜ್ಞಾನ ಶಿಕ್ಷಕ ನಿರಂಜನ್, ತೀತಾ ಕಾವೇರಿ ಗ್ರಾಮೀಣ ಬ್ಯಾಂಕ್ ನ ಮ್ಯಾನೇಜರ್, ವಾಣಿ ವಿದ್ಯಾ ಸಮಿತಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ D ಜಯಣ್ಣ, ಹಿರಿಯ ವಿದ್ಯಾರ್ಥಿ ಶ್ರೀನಿವಾಸ್, ನಿವೃತ್ತ ಶಿಕ್ಷಕ ಬಿ ನಾಗರಾಜು, ಡಿ ಜಯಣ್ಣ, ಮುಖ್ಯ ಶಿಕ್ಷಕ ಎಲ್.ಪಿ. ರಂಗಸ್ವಾಮಿ, ವಿಜ್ಞಾನ ಶಿಕ್ಷಕ ಎಲ್.ಆರ್. ಸುರೇಶ್ ಇದ್ದರು. ಟಿ.ಎಸ್.ನಿತ್ಯಾನಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು