Saturday, October 19, 2024
Google search engine
Homeಮುಖಪುಟಪ್ರಧಾನಿಯನ್ನು ತಹಶೀಲ್ದಾರ್ ಮಟ್ಟಕ್ಕೆ ಇಳಿಸಿದ ಮುಖ್ಯಮಂತ್ರಿ ಬೊಮ್ಮಾಯಿ - ಭಾಸ್ಕರ್ ರಾವ್ ಆರೋಪ

ಪ್ರಧಾನಿಯನ್ನು ತಹಶೀಲ್ದಾರ್ ಮಟ್ಟಕ್ಕೆ ಇಳಿಸಿದ ಮುಖ್ಯಮಂತ್ರಿ ಬೊಮ್ಮಾಯಿ – ಭಾಸ್ಕರ್ ರಾವ್ ಆರೋಪ

ತಹಶೀಲ್ದಾರ್‌ಗಳಿಂದ ವಿತರಣೆಯಾಗಬೇಕಿದ್ದ ಹಕ್ಕುಪತ್ರಗಳನ್ನು ಚುನಾವಣಾ ಪ್ರಚಾರದ ದೃಷ್ಟಿಯಿಂದ ಪ್ರಧಾನಿ ಮೂಲಕ ಕೊಡಿಸುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಯವರು ಪ್ರಧಾನಿ ಹುದ್ದೆಯನ್ನು ತಹಶೀಲ್ದಾರ್‌ ಮಟ್ಟಕ್ಕೆ ಇಳಿಸಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಮುಖಂಡ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಂಡ ಹಾಗೂ ಹಟ್ಟಿಗಳಲ್ಲಿ ವಾಸವಿರುವ ಬುಡಕಟ್ಟು ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕೆಲಸ ಬಹಳ ಹಿಂದೆಯೇ ಆಗಬೇಕಿತ್ತು. ಇದು ತಹಶೀಲ್ದಾರ್‌ ಮಟ್ಟದ ಕೆಲಸವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುವ ತನಕ ಕಾಯುವ ಅಗತ್ಯವಿರಲಿಲ್ಲ ಎಂದು ಟೀಕಿಸಿದರು.

ಜನಪರ ಆಡಳಿತ ನೀಡಲು ವಿಫಲವಾಗಿರುವ ಬಿಜೆಪಿ ಸರ್ಕಾರವು ಪ್ರಚಾರ ಗಿಟ್ಟಿಸಿಕೊಳ್ಳಲು ಹಕ್ಕುಪತ್ರ ವಿತರಣೆಗೂ ಚುನಾವಣೆ ತನಕ ಕಾದಿರುವುದು ದುರಂತ. ದೊಡ್ಡ ಪ್ರಮಾಣದಲ್ಲಿ ಹಕ್ಕು ಪತ್ರ ವಿತರಣೆಯನ್ನು ಇಷ್ಟು ದಿನ ಬಾಕಿ ಉಳಿಸಿಕೊಂಡು ಪ್ರಧಾನಿಯವರಿಂದ ಕೊಡಿಸಿರುವುದು ಕೇವಲ ಪ್ರಚಾರ ಪಡೆಯುವ ಗಿಮಿಕ್” ಎಂದು ದೂರಿದರು.

ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಪ್ರಧಾನಿಗೆ ಪತ್ರ ಬರೆದು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಹೇಳಿದ್ದರು. ಬೆಂಗಳೂರಿನ ಕಳಪೆ ಮೂಲಸೌಕರ್ಯಗಳು, ಉತ್ತರ ಕರ್ನಾಟಕದ ಅಭಿವೃದ್ಧಿ, ಕನ್ನಡಕ್ಕಾಗುತ್ತಿರುವ ಅನ್ಯಾಯ, ಗಡಿ ವಿವಾದಗಳು, ನದಿ ನೀರು ಹಂಚಿಕೆ ವಿವಾದಗಳು, ಗುತ್ತಿಗೆ ಕಾಮಗಾರಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ 40ರಷ್ಟು ಕಮಿಷನ್‌ ದಂಧೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಮೇಲೆ ಸರ್ಕಾರದ ದಿವ್ಯ ನಿರ್ಲಕ್ಷ್ಯ, ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಬಾಕಿ – ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಭೇಟಿಯನ್ನು ಬಳಸಿಕೊಳ್ಳುವಂತೆ ಆಮ್‌ ಆದ್ಮಿ ಪಾರ್ಟಿ ಒತ್ತಾಯಿಸಿತ್ತು. ಆದರೆ ಪ್ರಧಾನಿಯವರ ಭೇಟಿಯು ಚುನಾವಣಾ ಗಿಮಿಕ್‌ಗಳಿಗೆ ಸೀಮಿತವಾಗಿದೆ ಎಂದು ಭಾಸ್ಕರ್‌ ರಾವ್‌ ವಾಗ್ದಾಳಿ ನಡೆಸಿದರು.

ಆಮ್‌ ಆದ್ಮಿ ಪಾರ್ಟಿ ಮುಖಂಡ ಬಿ.ಟಿ.ನಾಗಣ್ಣ ಮಾತನಾಡಿ, ಸರ್ಕಾರದ ಅನೇಕ ವೈಫಲ್ಯಗಳಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಪರಿಣಾಮವಾಗಿ ಬಿಜೆಪಿ ಬೆಂಬಲಿಗರನ್ನು ಜನಸಾಮಾನ್ಯರು ಗೇಲಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ಅವರನ್ನು ಓಲೈಸಿಕೊಂಡು ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಆಪಾದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular