ಪ್ರಜಾಧ್ವನಿ ಎಂದರೆ ಬಸ್ ನ ಹೆಸರಲ್ಲ, ಇಲ್ಲಿರುವ ನಾಯಕರ ಹೆಸರಲ್ಲ, ಇದು ರಾಜ್ಯದ ಜನರ ಧ್ವನಿಯ ಹೆಸರಾಗಿದೆ. ವಿಜಯನಗರವಾಗಲಿ, ಬಳ್ಳಾರಿಯಾಗಲಿ ಅಥವಾ ರಾಜ್ಯದ ಇತರ ಪ್ರದೇಶವಾಗಲಿ, ಈ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತಿವೆ. ಹಿಂದೂಸ್ಥಾನದ ಅತ್ಯಂತ ಭ್ರಷ್ಟ ಸರ್ಕಾರ ಎಂದರೆ ಅದು ಬೊಮ್ಮಾಯಿ ಸರ್ಕಾರ. ಹಿಂದೂಸ್ಥಾನದಲ್ಲಿ ರಾಜ್ಯದ ಖಜಾನೆಯನ್ನು ಹೆಚ್ಚಾಗಿ ಲೂಟಿ ಮಾಡಿರುವ ಸರ್ಕಾರ ಎಂದರೆ ಅದು ರಾಜ್ಯ ಬಿಜೆಪಿ ಸರ್ಕಾರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ
ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು 40% ಕಮಿಷನ್ ಸರ್ಕಾರ, ಪೇಸಿಎಂ ಸರ್ಕಾರ, ಇವರು ಯಾರನ್ನೂ ಬಿಟ್ಟಿಲ್ಲ. ಬಿಜೆಪಿಯವರನ್ನೇ ಬಿಟ್ಟಿಲ್ಲ. ಇವರಿಗೆ ಪ್ರತಿನಿತ್ಯ ಹಣ ಬೇಕು, ಎರಡೂ ಕೈಗಳಿಂದ ರಾಜ್ಯವನ್ನು ಲೂಟಿ ಮಾಡಿ ಮನೆಗೆ ಹೋಗುತ್ತಾರೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇವರ ಹಣದದಾಹಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದರು.
ಡಿ.ಎಂ ಪ್ರಶಾಂತ್ ಎಂಬ ಮತ್ತೊಬ್ಬ ಗುತ್ತಿಗೆದಾರ ಗುಂಡು ಹಾರಿಸಿಕೊಂಡು ಸತ್ತಿದ್ದಾನೆ. ಆತನ ಮನೆಗೆ ಹೋದಾಗ ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ನಾವು ಇದ್ದಷ್ಟು ಕಾಲ ಅಳುತ್ತಿದ್ದರು. ವಯಸ್ಸಾದ ತಂದೆ ತಾಯಿ ನಡೆಯಲು ಸಾಧ್ಯವಾಗಲಿಲ್ಲ. ನಾನು ಈ ವೇದಿಕೆ ಮೂಲಕ ಬೊಮ್ಮಾಯಿ ಅವರು ಸಂತೋಷ್ ಪಾಟೀಲ್, ಪ್ರಸಾದ್ ಹಾಗೂ ರಾಜೇಂದ್ರ ಅವರ ಜೀವವನ್ನು ವಾಪಸ್ ಕರೆತರುತ್ತಾರಾ? ಎಂದು ಪ್ರಶ್ನಿಸಿದರು.
ಇಷ್ಟೇ ಅಲ್ಲ, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬಿಜೆಪಿ ಶಾಸಕನ ವಿರುದ್ಧ 90 ಲಕ್ಷ ಲಂಚದ ಆರೋಪ ಮಾಡಿದ್ದಾರೆ. ಗುತ್ತಿಗೆದಾರರ ಸಂಘದ ಆರೋಪ, ಕಾಂಗ್ರೆಸ್ ಪಕ್ಷದ ಆರೋಪವನ್ನು ಬಿಟ್ಟುಬಿಡಿ. ಬಿಜೆಪಿ ಶಾಸಕ ಯತ್ನಾಳ್ ಪ್ರತಿನಿತ್ಯ ಸಾರ್ವಜನಿಕವಾಗಿ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು 2500 ಕೋಟಿಗೆ ಮಾರಾಟ ಮಾಡಿದೆ. ಸಿಎಂ ಕುರ್ಚಿಯನ್ನು ಮಾರಾಟ ಮಾಡಿದರೆ ನಿಮ್ಮನ್ನು ಸುಮ್ಮನೇ ಬಿಡುವರೇ? ಬಿಜೆಪಿಯ ಕೈಗಾರಿಕ ಸಚಿವರನ್ನು ಯತ್ನಾಳ್ ಅವರು ದಳ್ಳಾಳಿ ಎಂದು ಕರೆದರು. ಈ ಸರ್ಕಾರ ಅಧಿಕಾರದಲ್ಲಿ ಕೂತು ದಳ್ಳಾಳಿಗಿರಿ ಮಾಡುತ್ತಿದೆಯೇ? ಇದನ್ನು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಮಾದಕದ್ರವ್ಯ ವಿಚಾರವಾಗಿ ನಡೆದ ದಾಳಿ ಯುವಕರ ಮೇಲೆ, ಸಿನಿಮಾ ತಾರೆಯರ ಮೇಲೆ ನಡೆದ ದಾಳಿ ಅಲ್ಲ. ಅದು ಬಿಜೆಪಿ ನಾಯಕರ ವಿಡಿಯೋ ರಕ್ಷಿಸಲು ಮಾಡಲಾದ ದಾಳಿಯಾಗಿತ್ತು. ಈ ಸರ್ಕಾರ ಎಂತಹ ನೀಚ ಹಂತಕ್ಕೆ ತಲುಪಿದೆ ಎಂದರೆ ವಶ್ಯಾವಾಟಿಕೆ ದಂಧೆ ನಡೆಸುವ ಸ್ಯಾಂಟ್ರೋ ರವಿ ಎಂಬ ವ್ಯಕ್ತಿ ವ್ಯಕ್ತಿ ಪೊಲೀಸ್ ಎಸ್ಪಿ, ಡಿವೈಎಸ್ಪಿಗೆ ಕರೆ ಮಾಡುತ್ತಾರೆ. ಇದು ಸರ್ಕಾರ ನಡೆಸುವ ರೀತಿಯೇ? ಇವರು ನಿಮ್ಮ ಮಕ್ಕಳಿಗೆ ನೆರವು ನೀಡುವರೇ? ಎಂದು ಕೇಳಿದರು.
ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ದೇಶದ ಗೃಹಮಂತ್ರಿ ಅಮಿತ್ ಶಾ ಅವರನ್ನು ರೌಡಿ ಎಂದು ಕರೆದಿದ್ದಾರೆ. ಇದು ರೌಡಿಗಳ ಪಕ್ಷವೇ? ಗೂಂಡಾಗಳ ಸರ್ಕಾರದ ಬಗ್ಗೆ ಮಾತನಾಡುವುದಾದರೆ ಅದರ ಒಂದು ಭಾಗ ಈ ಜಿಲ್ಲೆಯಲ್ಲೂ ಇದೆ. ನಮ್ಮ ಪರಿಶಿಷ್ಟ ಜಾತಿಯ ಸಹೋದರರ ಮೇಲೆ ಮಂತ್ರಿ ಆನಂದ್ ಸಿಂಗ್ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಮೊಕದ್ದಮೆ ದಾಖಲಾದರೂ ಆತ ಜೈಲಿನಲ್ಲಿರುವ ಬದಲು ಮಂತ್ರಿ ಕುರ್ಚಿ ಮೇಲೆ ಕೂತಿದ್ದಾರೆ ಎಂದರು.