ಭೋವಿ ಸಮುದಾಯದವರು ಜಾತ್ರೆ ಮಾಡಿ ಅಪಾರ ಹಣ ಖರ್ಚು ಮಾಡುವುದನ್ನು ಬಿಟ್ಟು, ಜಯಂತಿಗಳನ್ನು ಮಾಡುವ ಮೂಲಕ ಜಾಗೃತವಾಗಬೇಕು, ಜಯಂತಿಗಳು ಅರಿವಿನ ಸಂಕೇತವಾಗಿವೆ. ನೀವು ಅರಿವಿಗೆ ಪ್ರಾಧಾನ್ಯತೆ ನೀಡಿ ಎಂದು ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಆಯೋಜಿಸಿದ ಕಾಯಕಯೋಗಿ ಗುರು ಸಿದ್ದರಾಮೇಶ್ವರರ 850 ನೇ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿ, ಅಡಂಬರದ ಜಾತ್ರೆಗಳಿಂದ ಅಪಾರ ನಷ್ಟವಾಗುತ್ತದೆ. ಗಳಿಸಿದ ಹಣವನ್ನು ಉಳಿಕೆ ಮಾಡಿ ಸದ್ಬಳಿಕೆ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದರು.
ತುಮಕೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್ ಗೋವಿಂದರಾಜು ಮಾತನಾಡಿ, ಡಾ.ಬಿ ಆರ್ ಅಂಬೇಡ್ಕರ್ ರವರು ಸಂವಿಧಾನದತ್ತವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದ್ದು, ಈ ಮೀಸಲು ರಕ್ಷಣೆ ಗೆ ನಾವೆಲ್ಲಾ ಒಂದಾಗಬೇಕು ಎಂದರು.
ದೇಶದಲ್ಲಿ ಅಂಬೇಡ್ಕರ್ ಹಿಂದುಳಿದವರು ಶೈಕ್ಷಣಿಕವಾಗಿ, ಅರ್ಥಿಕವಾಗಿ, ಔದ್ಯೋಗಿಕವಾಗಿ ಮುಂದುವರೆಯಲು ಮೀಸಲಾತಿ ನೀಡಿ ನಮಗೆ ಶಕ್ತಿ ತುಂಬಿದ್ದಾರೆ. ಬಹುಶಃ ಅಂಬೇಡ್ಕರ್ ಭಾರತದಲ್ಲಿ ಹುಟ್ಟಿಲ್ಲವೆಂದರೆ ಹಿಂದುಳಿದವರೆಗೆ ಮೀಸಲು ಸಿಗುತ್ತಿರಲ್ಲ ಎಂದು ಹೇಳಿದರು.