ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಮಂಗಳವಾರ ಮೂರನೇ ಬಾರಿಗೆ ವಕೀಲ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯನ್ನಾಗಿ ನೇಮಿಸುವ ನಿರ್ಧಾರವನ್ನು ಪುನರುಚ್ಚರಿಸಿದೆ.
ಹಾಗೆಯೇ ಐದು ಹೈಕೋರ್ಟ್ ಗಳ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಇತರ ಎಂಟು ಹೆಸರುಗಳನ್ನು ಕೊಲಿಜಿಯಂ ಶಿಫಾರಸು ಮಾಡಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸುಪ್ರೀಂಕೋರ್ಟ್ ಕೊಲಿಜಿಯಂ ಜನವರಿ 10, 2023ರಂದು ನಡೆದ ಸಭೆಯಲ್ಲಿ ಮರುಪರಿಶೀಲನೆಯ ಮೇಲೆ ವಕೀಲರಾದ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಮಾಡುವ ಹಿಂದಿನ ಶಿಫಾರಸನ್ನು ಪುನರುಚ್ಚರಿಸಿದೆ.
ಸಾಂಪ್ರದಾಯಿಕವಾಗಿ ನಿರ್ಧಾರವನ್ನು ಪುನರುಚ್ಚರಿಸಿದ ಸರ್ಕಾರವು ಕೊಲಿಜಿಯಂ ಶಿಫಾರಸನ್ನು ಒಪ್ಪಿಕೊಳ್ಳಲು ಬದ್ದವಾಗಿದೆ. ಕೊಲಿಜಿಯಂ ನ್ಯಾಯಾಂಗ ಅಧಿಕಾರಿಗಳಾದ ಅರಿಬಮ್ ಗುಣೇಶ್ವರ್ ಶರ್ಮಾ ಮತ್ತು ಗೊಲ್ಮೆಯ್ ಗೈಪುಲ್ ಶಿಲ್ಲು ಕುಬಯಿ ಅವರನ್ನು ಮಣಿಪುರ ಹೈಕೋರ್ಟ್ ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ.
ಆಂಧ್ರಪ್ರದೇಶ ಹೈಕೋರ್ಟ್ ಗೆ ಕೊಲಿಜಿಯಂ ನ್ಯಾಯಾಂಗ ಅಧಿಕಾರಿಗಳಾದ ಪಿ.ವೆಂಕಟ ಜ್ಯೋತಿರ್ಮಾಯಿ ಮತ್ತು ವಿ.ಗೋಪಾಲಕೃಷ್ಣ ರಾವ್ ಅವನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ.
ಗೌಹಾಟಿ ಹೈಕೋರ್ಟ್ ಗೆ ನ್ಯಾಯಾಂಗ ಅಧಿಕಾರಿ ಮೃದುಲ್ ಕುಮಾರ್ ಕಲಿತಾ ಅವರನ್ನು ಶಿಫಾರಸು ಮಾಡಿದೆ. ಬಾಂಬೆ ಹೈಕೋರ್ಟ್ ಗೆ ನ್ಯಾಯವಾದಿ ನೀಲಾ ಕೇದಾರ್ ಗೋಖ್ಲೆ ಅವರನ್ನು ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಶಿಫಾರಸು ಮಾಡಿದೆ.