ಮುಂದಿನ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಕೋಲಾರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವರು ನನಗೆ ಸ್ಪರ್ಧಿಸಲು ಸರಿಯಾದ ಕ್ಷೇತ್ರವೇ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ವರುಣಾದಿಂದ ಮತ್ತೆ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ, ಕೋಲಾರದಲ್ಲಿ ಜನ ಮತ್ತು ಕ್ಷೇತ್ರದ ಹಾಲಿ ಶಾಸಕರಾದ ಶ್ರೀನಿವಾಸ ಗೌಡ ಅವರು ನೀವು ಇಲ್ಲಿಂದ ಸ್ಪರ್ಧೆ ಮಾಡಿದರೆ ನಾನು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡದೆ ನಿಮಗೆ ಬೆಂಬಲ ನೀಡುತ್ತೇನೆ ಎನ್ನುತ್ತಿದ್ದಾರೆ ಎಂದರು.
ಇಲ್ಲಿನ ಜನರ ಪ್ರೀತಿ ಅಭಿಮಾನವನ್ನು ನಾನು ತಿರಸ್ಕಾರ ಮಾಡಲಾರೆ. ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಹೈಕಮಾಂಡ್ ನ ಅನುಮತಿ ಮೇರೆಗೆ ನನ್ನ ಸ್ಪರ್ಧೆ ನಿರ್ಧಾರವಾಗಲಿದೆ. ಸಿದ್ದರಾಮಯ್ಯ ಎಂಬ ಕಾರಣಕ್ಕೆ ಪಕ್ಷದಲ್ಲಿ ನನಗೊಬ್ಬನಿಗೇ ವಿಶೇಷ ಅವಕಾಶ, ಸೌಲಭ್ಯ ಇಲ್ಲ, ಪಕ್ಷದಲ್ಲಿ ಯಾರೇ ಆಗಲಿ ಎಲ್ಲರೂ ಹೈಕಮಾಂಡ್ ನ ಅನುಮತಿ ಪಡೆದು ಸ್ಪರ್ಧೆ ಮಾಡಬೇಕು. ಅದರಂತೆ ನನಗೂ ಹೈಕಮಾಂಡ್ ಅನುಮತಿ ನೀಡಿದರೆ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧೆ ಮಾಡಿ ಜಯಗಳಿಸಿದರೆ ಪ್ರತೀ ವಾರ ಕೋಲಾರಕ್ಕೆ ಬರುತ್ತೇನೆ. ನಾನು ಬೆಳೆಸಿಕೊಂಡು ಬಂದಿರುವ ಸಂಪ್ರದಾಯದಂತೆ ಯಾವ ಮುಖಂಡನನ್ನೂ ತಮ್ಮ ಜೊತೆ ಕರೆದುಕೊಂಡು ಬಂದು ನನ್ನನ್ನು ಭೇಟಿ ಮಾಡಬೇಕಾದ ಅಗತ್ಯ ಇಲ್ಲ, ಯಾವುದೇ ಸಾಮಾನ್ಯ ವ್ಯಕ್ತಿ ಬಂದು ನನ್ನನ್ನು ನೇರವಾಗಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಜೊತೆಗೆ ನಾನು ಸ್ಪರ್ಧಿಸಿ ಗೆದ್ದ ಕ್ಷೇತ್ರಕ್ಕೆ ವಿಶೇಷ ಕಾಳಜಿ ನೀಡಿ ಅಭಿವೃದ್ಧಿ ಮಾಡಿದ್ದೇನೆ. ಇಡೀ ರಾಜ್ಯದ ಎಲ್ಲಾ ಜನರ ನೆರವಿಗೆ ಹೋಗುವಂತಾ ಕೆಲಸಗಳನ್ನು ಹಿಂದೆಯೂ ಮಾಡಿಕೊಂಡು ಬಂದಿದ್ದೇನೆ, ಮುಂದೆಯೂ ಮಾಡಲಿದ್ದೇನೆ ಎಂದು ಹೇಳಿದ್ದಾರೆ.
ಕೋಲಾರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸುದರ್ಶನ್ ಅವರು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ನಾನು ಈ ಹಿಂದೆ ಸ್ಪರ್ಧೆ ಮಾಡಿ ಗೆದ್ದುಬಂದ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುವ ವಿಚಾರದಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಇಲ್ಲಿಂದಲೇ ಚುನಾವಣೆಗೆ ನಿಂತು ನಾನು ಶಾಸಕನಾಗಿ ಆಯ್ಕೆಯಾದರೆ ಇಡೀ ಕೋಲಾರದ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಮಹತ್ವ ಕೊಡುತ್ತೇನೆ. ಇದರಲ್ಲಿ ಅನುಮಾನವೇ ಬೇಡ ಎಂದು ಆಶ್ವಾಸನೆ ನೀಡಿದರು.