Friday, September 20, 2024
Google search engine
Homeಮುಖಪುಟಏಸುಕ್ರಿಸ್ತನ ನೆನೆದು

ಏಸುಕ್ರಿಸ್ತನ ನೆನೆದು

ಓ.., ಏಸುಕ್ರಿಸ್ತನೇ ಜಗದಲ್ಲಿ ನೀನೊಬ್ಬ ಹಿರೇಕುರುಬ !
ಅತ್ತಲ ಪಡುವಣದ ಸುಳಿಗಾಳಿ
ಇತ್ತಲ ಕತ್ತಲರಾಜ್ಯದಲ್ಲಿ
ತೀಡಿದ ದಶಂಬರದ ಚಳಿಗಾಲದಲ್ಲಿ ಚಂದ್ರಮಂಡಲದ ಬೆಳಕಿನಲ್ಲಿ
ಕುರುಬ ಬೊಪ್ಪೇಗೌಡನು
ಮಂಟೇಸ್ವಾಮಿ ನಿರ್ವಾಣ ಹೊಂದುವಾಗ ಕುರಿರೊಪ್ಪದ
ಜೀವತಾಣದ ಉಸಿರು
ಜೀವಸಮಾಧಿಯಾಗಲು ಭೂದಾನ ನೀಡಿದನು.

ಮಠಮನೆಯಾಯಿತು ಚಂದ್ರಬಾವಿಯಾಯಿತು.‌
ಗುರುಮಣಿ ಕಟ್ಟಿಕೊಂಡು
ಏಳುಗಿಣ್ಣಿನ ಬಿದಿರುಗೋಲು ಹಿಡಿದು ನೀಲಗಾರರ ಗಂಡ
ಭೂಲೋಕದುದ್ಧಂಡ
ಘನನೀಲಿ ಸಿದ್ದಪ್ಪಾಜಿಯು ಗುರುಮನೆಯ ಕುರಿಗಳ ಪದನೂರು ನುಡಿಯಲು ಪಂಜರದ ಕೌಜಗದ ಹಕ್ಕಿ
ಪಂಜರವ ಕಿತ್ತೊಗೆದು
ಪುರ್ರನೆ ಹಾರಿ ಆಕಾಶದಗಲ
ಮೂಜಗದ ಹಾಡನ್ನು
ಸೋಜಿಗದಲ್ಲಿ ಉಲಿದಿತ್ತು !

ಓ ಕುರುಬ ಕ್ರಿಸ್ತನೇ
ನಮ್ಮೂರಿನ ಕೆರೆಯಂಗಳದಲ್ಲಿ
ನಿನ್ನ ಕುರಿಗಳ ಹೆಜ್ಜೆಗಳು ಆಕಾಶದ
ನಕ್ಷತ್ರ ಪರಿಶೆಯಂತೆ ಕಂಗೊಳಿಸುತ್ತಿವೆ!
ಆಲಂಬಾಡಿ ಕುರುಬ ಜುಂಜೇಗೌಡನು
ಕರೇಕುಲದ ಮಾದಾರ ಮಾದಪ್ಪನಿಗೆ ಏಳಂಕಣದ ಗುಡಿಕಟ್ಟಿ
ಉಘೇ ಮಹದ್ ಮಲ್ಲಯ್ಯ ಎಂದು
ಪರಾಕು ಹಾಕುವ ಚುಮು ಚುಮು ಚಳಿಗಾಲದಲ್ಲಿ
ಓ.. ಹಿರೇಕುರುಬ ಏಸುಕ್ರಿಸ್ತನೇ ನೀನು ನೆನಪಾಗುತ್ತೀಯ.

ಕುರುಬ ಜಲಧಿ ಬೊಪ್ಪರಾಯನು
ಹರಿವ ನದಿಯ ಕಡೆಹಾಯಿಸಿ ಕಾಪಾಡಿದ ಕುಂಚೊಕ್ಕಲು ಮಕ್ಕಳಾದ
ಕಲಿವೀರ ಉದ್ದಿಗರಾಯ ಪೆಮ್ಮಿಗರಾಯ ಕುರಿಕಾಯ್ದ ಹೊಲಮಾಳದಲ್ಲಿ
ಅಡವಿಗೊಲ್ಲರ ಹುಡುಗಿ ಮದ್ದಮ್ಮ ಹಾಲುಕಾವಡಿಯಲ್ಲಿ ಲೋಲನಾಡುತಾ ಒಲಿದು ಬಂದಳು ವೀರಕ್ಯಾತರಾಯನ ಸಿರಿಮುಡಿಗೆ! ಉಂಡಾಡಿ ಪದುಮಣ್ಣ ದುಂಡುಮಲ್ಲಿಗೆ
ಮುಡಿದು ಅಂಡಬಂಡ ಮುದಿಗುರಿಯ
ಹುಡುಕುತ್ತಾ ಬಂದ ದಾರಿಯಲ್ಲಿ
ಕೊಳಲಗಾನ ಆಲಿಸಲು ಕಾಡುಗೊಲ್ಲರ ಕೃಷ್ಣಲೀಲೆ! ಎತ್ತಪ್ಪ ಜುಂಜಪ್ಪ ಬೀರಲಿಂಗಯ್ಯ, ಗುರು ಬಾರಲಿಂಗಯ್ಯ
ಕಾರಯ್ಯ ಬಿಲ್ಲಯ್ಯ ಕನಕ ಎಮ್ಮೆಬಸವ ಕುರಿ ಕಾಯುವಾಗ
ಕನ್ನಡ ನಾಡಿನಲ್ಲಿ ಏನೆಂಥಾ ಕುರುಬರ ಪದನೂರು ಎದೆಯಲ್ಲಿ ಆಲಿಸೋ ಹಿರೇಕುರುಬ ಏಸುಕ್ರಿಸ್ತನೇ !

ನಮ್ಮ ಮನೆ ಮುಂದಲಾರ ಕುರಿ ರೊಪ್ಪದಲ್ಲಿ ತಾಯಿ ಲಚ್ಚುಮಮ್ಮ ನಗುನಗುತ್ತಾ ಕುಳಿತಿದ್ದಾಳೆ ಚಂದ್ರಾಮ ಹೊಳೆದಂತೆ!
ಓ ಕ್ರಿಸ್ತನೇ ನಿನ್ನ ಬಂಧುಗಳೆಲ್ಲಾ ಕುರಿಗಳಂತೆ ನಾನಿನ್ನ ಕುರಿಮರಿ…
ನೀರು ಹುಲ್ಲು ನೆರಳಿರುವ ಕಾವಲಿನೆಡೆಗೆ
ಕರೆದೊಯ್ದು ಮೇಯಿಸುವೆ ನೀನು ಜಗದ ಕುರಿಗಾರ!
ಬುದ್ಧನ ಕರುಣಾಮೈತ್ರಿಯಲ್ಲಿ ನಿನ್ನನ್ನೇ ಕಾಣುವೆ
ಬಸವಣ್ಣನ ದಯೆಯಲ್ಲಿಯೂ ನಿನ್ನನ್ನೇ ಕಾಣುವೆ
ಕ್ಷಮೆ ಮತ್ತು ಕರುಣೆಯ ಕಡಲೇ ಓ ಕ್ರಿಸ್ತಪ್ರಭುವೇ ನನ್ನನ್ನು
ಕ್ಷಮಿಸಿ ಸರುವದಾ ಪಾಪಗಳನ್ನು ತೊಳೆದು ಬೆಳಗೋ ಕ್ಷಮಾ ಮೂರುತಿಯೇ..,

— ಡಾ.ವಡ್ಡಗೆರೆ ನಾಗರಾಜಯ್ಯ, ಲೇಖಕರು, ಕವಿಗಳು, ಸಂಸ್ಕೃತಿ ಚಿಂತಕರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular