ಜನಾರ್ದನರೆಡ್ಡಿ ಅವರು ಹೊಸ ಪಕ್ಷ ಸ್ಥಾಪಿಸಿದ್ದು ಅವರಿಗೆ ಒಳ್ಳೆಯದಾಗಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾರೈಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಶಿವಕುಮಾರ್, ಅವರಿಗೆ ಯಶಸ್ಸು ಸಿಗಲಿ, ಶುಭವಾಗಲಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಂಚಾಯಿತಿ ಯಿಂದ ಪಾರ್ಲಿಮೆಂಟ್ ವರೆಗೂ ನಾಯಕರು ಬೆಳೆಯಬೇಕು ಎಂದು ಹೇಳಿದರು.
ಅವರು ಸಾಧ್ಯವಾದಷ್ಟು ಜನ ಸೇವೆ ಮಾಡಲಿ, ಈ ಸಮಯದಲ್ಲಿ ಟೀಕೆ ಮಾಡುವ ಪ್ರವೃತ್ತಿ ನನ್ನದಲ್ಲ. ಒಳ್ಳೆಯ ಕೆಲಸ ಮಾಡಲು ಯಾರೇ ಮುಂದೆ ಬಂದರೂ ನಾವು ಅಭಿನಂದಿಸುತ್ತೇವೆ ಎಂದು ಡಿಕೆಶಿ ತಿಳಿಸಿದರು.
ಕೇಂದ್ರದ ಬಿಜೆಪಿ ನಾಯಕರನ್ನು ಕಠೋರವಾಗಿ ನಿಂದಿಸಿ ಯಡಿಯೂರಪ್ಪ ಅವರನ್ನು ಹೊಗಳಿ ಪಕ್ಷ ಸ್ಥಾಪನೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ವೈಯಕ್ತಿಕ ಹಾಗೂ ಅವರ ಪಕ್ಷದ ವಿಚಾರ. ನಾವು ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಮತ್ತು ಜಾತ್ಯತೀತ ತತ್ವಕ್ಕೆ ಬೆಲೆ ಕೊಡುವವರನ್ನು ಗೌರವಿಸುತ್ತೇವೆ. ನಾವು ನೀತಿ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ವಿವರಿಸಿದರು.
ಹೊಸ ಪಕ್ಷದಿಂದ ಬಳ್ಳಾರಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅವರು ಇಂದು ಪಕ್ಷದ ಘೋಷಣೆ ಮಾಡಿದ್ದಾರೆ. ಒಂದು ಗಿಡ ಮರವಾಗಲು ಸಾಕಷ್ಟು ಸಮಯಬೇಕು. ಅವರಿಗೆ ಒಳ್ಳೆಯದಾಗಲಿ ಎಂದರು.


