ಜಾತ್ಯತೀತ ಮೌಲ್ಯಗಳನ್ನು ಗಾಳಿಗೆ ತೂರಿ, ಕೋಮುಸಂಘರ್ಷಕ್ಕೆ ಕಾರಣವಾಗಿರುವ ಬಿಜೆಪಿ ಮತ್ತು ಆರ್.ಎಸ್.ಎಸ್.ವಿರುದ್ದ ಡಿಸೆಂಬರ್ 6 ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧದ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನಪರ ಚಿಂತಕ ಕೆ.ದೊರೆರಾಜು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ದಲಿತ ಸಂಘಟನೆಗಳು ಒಗ್ಗೂಡಿ ಡಿಸೆಂಬರ್ 6 ರಂದು ದಲಿತ, ಕಾರ್ಮಿಕ, ರೈತವಿರೋಧಿ ಸರ್ಕಾರಕ್ಕೆ ತಮ್ಮ ಪ್ರತಿರೋಧ ತೋರುವ ನಿಟ್ಟಿನಲ್ಲಿ ಈ ಸಾಂಸ್ಕೃತಿಕ ಹೋರಾಟಕ್ಕೆ ಮುಂದಾಗಿದ್ದೇವೆ.ಎಲ್ಲಾ ದಲಿತ ಸಂಘಟನೆಗಳ ಮುಖಂಡರು ಸಹ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತುಮಕೂರು ಜಿಲ್ಲೆಯಿಂದಲೂ ಹೆಚ್ಚಿನ ಜನರು ಈ ಐಕ್ಯ ಪತ್ರಿರೋಧದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷದ ಜನವಿರೋಧಿ ನೀತಿಯಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಜಾತಿ,ಧರ್ಮದ ಹೆಸರಿನಲ್ಲಿ ಸಂಘರ್ಷಗಳು ಹೆಚ್ಚಾಗಿವೆ. ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣದ ಮೂಲಕ ಮೀಸಲಾತಿಯ ಪರಿಕಲ್ಪನೆಯೇ ಬುಡಮೇಲಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪಠ್ಯಪುಸ್ತಕದಲ್ಲಿ ಇತಿಹಾಸ ತಿರುಚಿ ಸೌಹಾರ್ದ ವಾತಾವರಣವನ್ನೇ ಹಾಳುಗೆಡುವಲಾಗುತ್ತಿದೆ. ದೇಶವನ್ನು ಇಂತಹ ದುಸ್ಥಿತಿಗೆ ತಂದ ಬಿಜೆಪಿ ಸರಕಾರದ ವಿರುದ್ದ ಸಂಘಟಿತ ಹೋರಾಟ ಮಾಡುವುದೇ ಈ ಸಾಂಸ್ಕೃತಿಕ ಪ್ರತಿರೋಧದ ಉದ್ದೇಶವಾಗಿದೆ ಎಂದು ಕೆ.ದೊರೆರಾಜು ತಿಳಿಸಿದರು.
ಹಿರಿಯ ದಲಿತ ಮುಖಂಡರಾದ ಗಂಗಮ್ಮ ಮಾತನಾಡಿ, ದೇಶದ ಜನಸಂಖ್ಯೆಯ ಶೇ50ರಷ್ಟಿರುವ ಮಹಿಳೆಯರನ್ನು ಈ ಸರ್ಕಾರ ಅತ್ಯಂತ ತುಚ್ಚವಾಗಿ ನಡೆಸಿಕೊಳ್ಳುತ್ತಿದೆ. ಇಂದು ಮಹಿಳೆಯರು ಅನುಭವಿಸುತ್ತಿರುವ ಎಲ್ಲಾ ಹಕ್ಕು ಮತ್ತು ಸ್ವಾತಂತ್ರಗಳಿಗೆ ಸಂವಿಧಾನದ ಪಿತಾಮಹ ಅಂಬೇಡ್ಕರ್ ಕಾರಣ. ಇದು ಸಾಧ್ಯವಾಗಿರುವುದು ಅವರು ನೀಡಿರುವ ಸಂವಿಧಾನದಿಂದ,ಇದರ ರಕ್ಷಣೆಯ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು.
ಹಿರಿಯ ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟಿರುವ ಬಿಜೆಪಿ ಮತ್ತು ಮನುವಾದಿ ಆರ್.ಎಸ್.ಎಸ್. ವಿರುದ್ದ ಚದುರಿರುವ ದಲಿತ ಸಂಘಟನೆಗಳೆಲ್ಲಾ ಒಂದಾಗಿ ಈ ಹೋರಾಟ ಯಶಸ್ವಿಗೊಳಿಸೋಣ ಎಂದು ಸಲಹೆ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ಕೃಷ್ಣಪ್ಪ ಬೆಲ್ಲದಮಡು ಹಿರಿಯ ದಲಿತ ಮುಖಂಡರಾದ ನರಸಿಂಹಯ್ಯ,ಶಿವಶಂಕರ್, ಬೆಲ್ಲದಮಡು ಭರತ್‌ಕುಮಾರ್, ಡಾ.ಮುರುಳೀಧರ್, ಕೊಟ್ಟ ಶಂಕರ್, ಚೇಳೂರು ಶಿವನಂಜಯ್ಯ ಇತರರು ಇದ್ದರು.


