ರಾಜ್ಯದಲ್ಲಿ 160 ಸಾಮಾನ್ಯ ವಿಧಾನಸಭಾ ಕ್ಷೇತ್ರಗಳಿವೆ. ಸಿದ್ದರಾಮಯ್ಯನವರಿಗೆ ಒಂದೂ ಕ್ಷೇತ್ರ ಸಿಗದಂತಾಗಿದೆ. ಇದರಿಂದ ಅವರ ಸ್ಥಿತಿ ಅಂಡು ಸುಟ್ಟ ಬೆಕ್ಕಿನಂತಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವ್ಯಂಗ್ಯವಾಡಿದ್ದಾರೆ.
ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು0 ಕ್ಷೇತ್ರಕ್ಕಾಗಿ ಓಡಾಡುತ್ತಿದ್ದಾರೆ. ಒಮ್ಮೆ ಕೋಲಾರಕ್ಕೆ ಹೋದರೆ, ಮತ್ತೊಮ್ಮೆ ಚಾಮರಾಜನಗರಕ್ಕೆ ಹೋಗುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಒಬ್ಬ ಸ್ವಯಂ ಘೋಷಿತ ಸಿಎಂ ಆಗಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ಮಾಜಿ ಸಚಿವ ಸಂತೋಷ್ ಲಾಡ್ ಹೇಳಿಕೆ, ಅದು ಅವರ ಪಕ್ಷದ ವಿಚಾರ. ಸಿದ್ದರಾಮಯ್ಯ ಹಾಗೂ ಡಿಕೆಶಿ ಚುನಾವಣೆಯಲ್ಲಿ ಸೋಲಬಹುದು ಎಂಬ ಕಾರಣಕ್ಕೆ ಲಾಡ್ ಹಾಗೆ ಹೇಳಿರಬಹುದು ಎಂದು ತಿಳಿಸಿದರು.
ಮಂಗಳೂರು ಕುಕ್ಕರ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಸಂಬಂಧದ ತನಿಖೆಯಲ್ಲಿ ಯಾವುದೇ ವೈಫಲ್ಯ ಆಗಿಲ್ಲ. ಈ ಸಂಬಂಧ ತನಿಖೆ ಇನ್ನೂ ನಡೆಯುತ್ತಿದೆ. ಅವರ ಮೇಲೆ ಕ್ರಮ ಆಗುತ್ತದೆ ಎಂದರು.
ಪರೇಶ್ ಮೇಸ್ತಾ ಪ್ರಕರಣ ಇನ್ನೊಮ್ಮೆ ತನಿಖೆ ಮಾಡಿಸುವ ಚಿಂತನೆ ನಡೆದಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದರ ಜೊತೆಗೆ ಧಾರವಾಡದಲ್ಲಿ ಈ ಹಿಂದೆ ಒಬ್ಬರು ನಮಗೆ ಚಾಲೆಂಜ್ ಹಾಕಿ ಧಾರವಾಡಕ್ಕೆ ಬರಲು ಹೇಳಿದರು. ಹಾಗಾಗಿ ಆ ಸವಾಲು ಸ್ವೀಕರಿಸಿ ಇಲ್ಲಿಗೆ ಬಂದಿದ್ದೇನೆ. ಮುಂದೆ ಕೆಲವೇ ದಿನಗಳಲ್ಲಿ ಧಾರವಾಡ ನಗರಕ್ಕೆ ಬಂದು ಭಾಷಣ ಮಾಡಿ ಅವರಿಗೆ ನಾನು ಏನು ಅಂತಾ ಹೇಳುತ್ತೇನೆ ಎಂದು ಹೇಳಿದರು.