ಹಿರೇಕೇರೂರು ಬಿಜೆಪಿ ಮಾಜಿ ಶಾಸಕ ಯು ಬಿ ಬಣಕಾರ್, ಬಿಜಾಪುರದ ಮಲ್ಲಿಕಾರ್ಜುನ ರೋಣಿ ಹಾಗೂ ಕೂಡ್ಲಗಿಯ ಜೆಡಿಎಸ್ ಮುಖಂಡ ಡಾ. ಎನ್ ಟಿ ಶ್ರೀನಿವಾಸ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಇತರ ನಾಯಕರು ಪಕ್ಷದ ಬಾವುಟ ಹಾಗೂ ಶಾಲು ನೀಡಿ ಈ ನಾಯಕರು ಹಾಗೂ ಅವರ ಬೆಂಬಲಿಗರನ್ನು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.
ನಮ್ಮ ಪಕ್ಷಕ್ಕೆ ಸೇರುವವರ ದೊಡ್ಡ ಪಟ್ಟಿ ಇದೆ. ಇದನ್ನು ಒಂದೇ ಬಾರಿ ಬಿಡುಗಡೆ ಮಾಡುವುದಿಲ್ಲ. ಇಂದು ಶುಭ ಮುಹೂರ್ತ, ಶುಭ ಗಳಿಗೆಯಲ್ಲಿ ಬೇರೆ ಪಕ್ಷದ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನಾನು ಪಕ್ಷದ ಹಿರಿಯ ನಾಯಕರು ಹಾಗೂ ಕೋಳಿವಾಡ ಅವರು, ಡಿ.ಆರ್. ಪಾಟೀಲ್ ಸೇರಿದಂತೆ ಆ ಭಾಗದ ಪಕ್ಷದ ಮುಖಂಡರ ಜತೆ ಚರ್ಚೆ ಮಾಡಿದ್ದೇನೆ. ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು ಇವರ ಸೇರ್ಪಡೆಗೆ ಒಮ್ಮತದ ಒಪ್ಪಿಗೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಇಂದು ಅವರಿಗೆ ತುಂಬು ಹೃದಯದ ಸ್ವಾಗತ ಬಯಸುತ್ತೇನೆ. ಬಣಕಾರ್ ಅವರ ಜತೆ ಮಂಜಣ್ಣ, ಶಿವರಾಜ್ ಹರಿಜನ್, ಮಹೇಂದ್ರ, ಹೇಮಣ್ಣ, ಷನ್ಮುಗಯ್ಯ ಅವರು ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರಿದರು.


