Monday, December 23, 2024
Google search engine
Homeಮುಖಪುಟವೋಟರ್ ಗೇಟ್ ಪ್ರಕರಣ - ಮುಖ್ಯಮಂತ್ರಿ ರಾಜಿನಾಮೆಗೆ ಕಾಂಗ್ರೆಸ್ ಆಗ್ರಹ

ವೋಟರ್ ಗೇಟ್ ಪ್ರಕರಣ – ಮುಖ್ಯಮಂತ್ರಿ ರಾಜಿನಾಮೆಗೆ ಕಾಂಗ್ರೆಸ್ ಆಗ್ರಹ

ಅಮೇರಿಕಾದಲ್ಲಿ ವಾಟರ್‌ ಗೇಟ್‌ ಪ್ರಕರಣ ಎಂದು ಕರೆಯುತ್ತಿದ್ದೆವು, ಅದೇ ರೀತಿ ಇದು ವೋಟರ್‌ ಗೇಟ್‌ ಪ್ರಕರಣ. ಜಗತ್ತಿನಲ್ಲಿ ಇಂಥಾ ಪ್ರಕರಣಗಳು ನಡೆಯುವುದು ಬಹಳ ಅಪರೂಪ, ನಮ್ಮ ರಾಜ್ಯದಲ್ಲಿ ನಡೆದಿದೆ. ಈ ಹಗರಣದಲ್ಲಿ ನೇರವಾಗಿ ಮುಖ್ಯಮಂತ್ರಿಗಳು ಷಾಮೀಲಾಗಿದ್ದಾರೆ. ಅವರೇ ಪ್ರಮುಖ ಅರೋಪಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪಾದಿಸಿದ್ದಾರೆ.

ಬೆಂಗಳೂರಿನಲ್ಲಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಜನರ ಮತದಾನದ ಹಕ್ಕನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿರುವುದು ಒಂದು ಗಂಭೀರ ಅಪರಾಧ. ಚುನಾವಣಾ ಆಯೋಗ ಒಂದು ಸಂವಿಧಾನಬದ್ಧವಾದ ಸಂಸ್ಥೆ, ಇದು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸಬೇಕು. ಚುನಾವಣೆಯಲ್ಲಿ ಅವ್ಯವಹಾರಗಳು ನಡೆದರೆ ಅದು ಪ್ರಜಾ ಪ್ರತಿನಿಧಿಕ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಹೇಳಿದರು.

ಈ ಹಗರಣದಲ್ಲಿ ಅಬ್ಬೆಪಾರಿಗಳ ಮೇಲೆ ಮೊಕದ್ದಮೆ ದಾಖಲು ಮಾಡಿಕೊಂಡು ಬಂಧಿಸಿದರೆ ಅದರಿಂದ ಉಪಯೋಗ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ನಗರದ ಉಸ್ತುವಾರಿ ಸಚಿವರು. ಅವರೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು, ಅವರು ನನಗೆ ಮತ್ತು ಈ ಹಗರಣಕ್ಕೆ ಸಂಬಂಧ ಇಲ್ಲ ಎಂದು ಹೇಳಲು ಬರಲ್ಲ ಎಂದರು.

ನಾವು ಪೊಲೀಸರಿಗೆ ದೂರು ನೀಡಿದ್ದೇವೆ, ಕೇಂದ್ರ ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರಿಗೂ ದೂರು ನೀಡಿದ್ದೇವೆ. ನಾನು ಅವರ ಬಳಿ ಹೀಗೆ ಲಕ್ಷಾಂತರ ಜನ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದೀರಿ, ಇದಕ್ಕೆ ಕಾರಣ ಯಾರು? ಬಿಬಿಎಂಪಿ ಮಾಡಿರುವ ಬೂತ್‌ ಲೆವೆಲ್‌ ಆಫಿಸರ್‌ ಗಳು ಯಾರೂ ಕೂಡ ಸರ್ಕಾರಿ ಅಧಿಕಾರಿಗಳಲ್ಲ, ಇವರು ಕಾನೂನಿಗೆ ವಿರುದ್ಧವಾಗಿ ಪರಿಷ್ಕರಣೆ ಮಾಡಿದ್ದಾರೆ ಎಂದು ದೂರಿದರು.

ಕೃಷ್ಣಪ್ಪ ರವಿಕುಮಾರ್‌ ಅವರ ಚಿಲುಮೆ ಸಂಸ್ಥೆಯ ಮೇಲೆ ಈ ವರೆಗೆ ಕೇಸ್‌ ದಾಖಲಿಸಿ, ಅವರ ಬಂಧನ ಮಾಡಿಲ್ಲ ಏಕೆ? ಕಚೇರಿ ಸಿಬ್ಬಂದಿಗಳನ್ನು ಬಂಧಿಸಿಲ್ಲ ಏಕೆ? ಬಿಬಿಎಂಪಿ ಕಮಿಷನರ್‌ ಅವರ ಬಂಧನವಾಗಿಲ್ಲ ಏಕೆ? ರಾಜ್ಯ ಮುಖ್ಯಚುನಾವಣಾಧಿಕಾರಿ ಅವರು ಜಂಟಿ ಆಯುಕ್ತರ ಮೂಲಕ ತನಿಖೆ ಮಾಡಿಸುತ್ತೇನೆ ಎನ್ನುತ್ತಿದ್ದಾರೆ, ಓರ್ವ ಜಂಟಿ ಆಯುಕ್ತ ತನಗಿಂತ ಮೇಲಿನ ಅಧಿಕಾರದಲ್ಲಿ ಇರುವ ಮುಖ್ಯಮಂತ್ರಿಗಳ ಮೇಲೆ ತನಿಖೆ ಮಾಡಿ ಶಿಕ್ಷೆ ಕೊಡೋಕೆ ಆಗುತ್ತದಾ? ಇವರ ಹೇಳಿಕೆ ಎಷ್ಟು ಹಾಸ್ಯಾಸ್ಪದವಾಗಿದೆ ಅಲ್ಲವೇ? ಎಂದು ಕಿಡಿಕಾರಿದರು.

ನಾವು ನೀಡಿರುವ ದೂರಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ದೂರು ದಾಖಲಿಸಿ ಬಂಧಿಸುವಂತೆ ಒತ್ತಾಯ ಮಾಡಿದ್ದೇವೆ. ನಮ್ಮ ಪಕ್ಷದ ಹಲವು ಶಾಸಕರು ಇಂದು ಬಂದು ತಮ್ಮ ಕ್ಷೇತ್ರದಲ್ಲಿ ಯಾವ ರೀತಿ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕ ಎಂದು ಕೇಳಿದರು.

ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂಬುದು ನಮ್ಮ ಒತ್ತಾಯ. ಈ ಹಗರಣದಲ್ಲಿ ಮುಖ್ಯಮಂತ್ರಿಯೇ ಕಿಂಗ್‌ ಪಿನ್. ಮುಖ್ಯಮಂತ್ರಿ ಆದವರು ಯಾವ ಹಗರಣವನ್ನು ಬೇಕಾದರೂ ಮಾಡಬಹುದಾ? ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದುಕೊಂಡು ಇಂಥದ್ದೊಂದು ಅಕ್ರಮಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ದೂರು ನೀಡಿ, ನ್ಯಾಯಾಂಗ ತನಿಖೆಗೆ ನೀವೆ ಒಪ್ಪಿಸಬಹುದು ಎಂದು ಅವರಿಗೆ ಒತ್ತಾಯ ಮಾಡಿದ್ದೇವೆ. ಅದಕ್ಕವರು ನಾನು ಕೇಂದ್ರ ಚುನಾವಣಾ ಆಯೋಗದವರ ಜೊತೆ ಮಾತನಾಡಿ ಮತ್ತೆ ನಿಮ್ಮನ್ನು ಸಂಪರ್ಕ ಮಾಡುತ್ತೇನೆ ಎಂದಿದ್ದಾರೆ. ರಾಜ್ಯ ಚುನಾವಣಾ ಆಯೋಗ ನಮ್ಮ ಮನವಿಗೆ ಸೂಕ್ತ ಸ್ಪಂದನೆ ನೀಡದಿದ್ದರೆ ಮುಂದೆ ಕೇಂದ್ರ ಚುನಾವಣಾ ಆಯೋಗದ ಬಳಿ ಹೋಗುತ್ತೇವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular