ಅಟ್ಟಿಕಾ ಬಾಬು ತುಮಕೂರು ನಗರ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯಲು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಷಫಿ ಅಹಮದ್ ಅವರ ಜೊತೆ ಚರ್ಚಿಸಿ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿಕೆ ನೀಡಿರುವುದು ಶುದ್ಧ ಸುಳ್ಳು ಎಂದ ಮಾಜಿ ಶಾಸಕ ಷಫಿ ಅಹಮದ್ ಹೇಳಿದ್ದಾರೆ.
ಈ ರೀತಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದು ಅಟ್ಟಿಕಾ ಬಾಬು ಅವರಿಗೆ ಶೋಭೆ ತರುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿರುವ ಅಟ್ಟಿಕಾ ಬಾಬು ನನ್ನ ಆಶೀರ್ವಾದವಿದೆ ಎಂದು ತಿಳಿಸಿದ್ದು ಈ ಮಾತನ್ನು ಅವರು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜೆಡಿಎಸ್ ಪಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕುಟುಂಬದವರೇ ಆದ ಡಾ.ರಫೀಕ್ ಅಹಮದ್ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಹಿಂದೆ ಶಾಸಕರಾಗಿ ತುಮಕೂರು ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ಮಾಜಿ ಶಾಸಕ ಷಫಿ ಅಹಮದ್ ಹೇಳಿದ್ದಾರೆ.
ಡಾ.ರಫೀಕ್ ಅಹಮದ್ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಆಗಿರುವಾಗ ಅಟ್ಟಿಕಾ ಬಾಬುಗೆ ನಾನು ಆಶೀರ್ವಾದ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮಾಜಿ ಶಾಸಕ ಡಾ.ಷಫಿ ಅಹಮದ್ ಸ್ಪಷ್ಟಪಡಿಸಿದ್ದಾರೆ.