ತಮಗೆ ಸಂತೋಷ ಆಗಬೇಕಾದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತುಹಾಕಬೇಕು ಎಂದು ಹೇಳಿದ್ದಾರೆ. ನನ್ನ ಪ್ರಕಾರ ರಾಜ್ಯದ ಜನ ಈಗಾಗಲೇ ಸಂಕಲ್ಪ ಮಾಡಿದ್ದಾರೆ, ಅದೇನೆಂದರೆ ಬಿಜೆಪಿಯ ಭ್ರಷ್ಟ, ದುರಾಡಳಿತದ ಸರ್ಕಾರವನ್ನು ಕಿತ್ತುಹಾಕಬೇಕು ಎಂಬುದಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬರುತ್ತಿದೆ, ಈ ಹಿನ್ನೆಲೆಯಲ್ಲಿ ನಾನು ಖರ್ಗೆಯವರಿಗೆ ನೀಡುವ ಭರವಸೆ ಎಂದರೆ ರಾಜ್ಯದ ಜನ ಬಿಜೆಪಿ ಸರ್ಕಾರವನ್ನು ಕಿತ್ತುಹಾಕಿ ಕಾಂಗ್ರೆಸ್ ಸರ್ಕಾರವನ್ನು ರಚನೆ ಮಾಡಿ, ಆ ಮೂಲಕ ನಿಮಗೆ ಅಭಿನಂದನೆ ಸಲ್ಲಿಸುತ್ತಾರೆ, ಇದರಲ್ಲಿ ಯಾವ ಸಂಶಯವೂ ಬೇಡ ಎಂದಿದ್ದಾರೆ.
ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು ಆದರೆ ನಮಗೆ ಇರುವ ಸವಾಲು ಕರ್ನಾಟಕದಲ್ಲಿ ಕೋಮುವಾದಿ, ಬಡವರ ವಿರೋಧಿ, ರೈತರ ಮತ್ತು ಅಲ್ಪಸಂಖ್ಯಾತರ ವಿರೋಧಿ ಸರ್ಕಾರವನ್ನು ಕಿತ್ತುಹಾಕಬೇಕು ಎಂಬುದು. ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಕಳೆದಿರುವ ಬಿಜೆಪಿ ಸರ್ಕಾರ ರಾಜ್ಯದ ಬಡವರು. ಯುವಕರು, ರೈತರು, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿಲ್ಲ ಎಂದು ದೂರಿದರು.
ಈ ಸರ್ಕಾರವನ್ನು 40ರಷ್ಟು ಕಮಿಷನ್ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ದೂರಿದ್ದಾರೆ. ಆದರೂ ಕ್ರಮ ಕೈಗೊಂಡಿಲ್ಲ. ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ತನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮೊನ್ನೆಮೊನ್ನೆ ನಂದೀಶ್ ಎಂಬ ಇನ್ಸ್ ಪೆಕ್ಟರ್ ಒತ್ತಡದಿಂದ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಬಸವರಾಜ್ ಎಂಬ ಗುತ್ತಿಗೆದಾರ ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇಂಥಾ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಯಾವತ್ತೂ ಬಂದಿರಲಿಲ್ಲ ಎಂದರು.
ರಾಜ್ಯದಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು ನೆಮ್ಮದಿಯಾಗಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ಇದೆ. ದ್ವೇಷ ರಾಜಕಾರಣ, ನಿರುದ್ಯೋಗ, ರೈತರ ಸಮಸ್ಯೆಗಳು ಇವುಗಳಿಗೆ ಪರಿಹಾರ ನೀಡುವ ಕೆಲಸ ಇಂದು ನಡೆಯುತ್ತಿಲ್ಲ. ಇದೇ ಕಾರಣಕ್ಕೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆ. ಇದರ ಮೂಲಕ ಜನರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂದು ತಿಳಿಸಿದರು.
ಖರ್ಗೆಯವರು ರಾಜ್ಯದಲ್ಲಿ ಸುದೀರ್ಘ ಕಾಲ ರಾಜಕಾರಣ ಮಾಡಿದವರು, ಆಡಳಿತ ನಡೆಸಿದ ಅನುಭವ ಇರುವವರು. ಹಲವು ಇಲಾಖೆಗಳಲ್ಲಿ ಅಭಿವೃದ್ಧಿಪರ ಚಿಂತನೆಗಳಿಂದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಖರ್ಗೆಯವರಿಗೆ ದ್ವೇಷದ, ಶ್ರೀಮಂತರ ಪರವಾದ ರಾಜಕಾರಣ ಮಾಡಿ ಗೊತ್ತಿಲ್ಲ. ಬಡವರ ಪರವಾದ, ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ದಾಂತಗಳಿಗೆ ಬದ್ಧರಾಗಿ, ಯಾವ ರಾಜಿಯಿಲ್ಲದೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದರು.
ಖರ್ಗೆಯವರು ಒಬ್ಬ ಸ್ವಾಭಿಮಾನಿ ರಾಜಕಾರಣಿ. ನಾನು ಕಂಡಂತೆ ಕರ್ನಾಟಕದಲ್ಲಿ ಸಮಚಿತ್ತವಿರುವ, ಮೌಢ್ಯವಿರೋಧಿ, ಪ್ರಗತಿಪರ ರಾಜಕಾರಣಿ ಇದ್ದರೆ ಅದು ಮಲ್ಲಿಕಾರ್ಜುನ ಖರ್ಗೆಯವರು. ಇಷ್ಟು ವರ್ಷಗಳ ಕಾಲ ಲೋಕಸಭೆ, ರಾಜ್ಯಸಭೆಯಲ್ಲಿ ಸೇವೆ ಮಾಡಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರೋದು ಹೆಮ್ಮೆಯ ವಿಚಾರ. ಇದು ರಾಜ್ಯ ಕಾಂಗ್ರೆಸ್ ಗೆ ಶಕ್ತಿಯನ್ನು ತಂದುಕೊಟ್ಟಿದೆ. 2023ರಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಖರ್ಗೆಯವರು ನೀಡಿರುವ ಎಚ್ಚರಿಕೆ ಮಾತುಗಳಂತೆ ನಾವು ನಡೆದುಕೊಳ್ತೇವೆ ಎಂದು ಹೇಳಿದರು.


