ನವೆಂಬರ್ 12 ರಂದು ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದೆ. ಹಳೆಯ ಪಿಂಚಣಿ ಯೋಜನೆ ಪುನಶ್ಚೇತನ, 300 ಯೂನಿಟ್ ಉಚಿತ ವಿದ್ಯುತ್, ರೂ 680-ಕೋಟಿ ಸ್ಟಾರ್ಟ್‌ಅಪ್ ನಿಧಿ, ಒಂದು ಲಕ್ಷ ಉದ್ಯೋಗಗಳು ಮತ್ತು 18 ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ತಿಂಗಳಿಗೆ ರೂ 1,500 ಭತ್ಯೆ ನೀಡುವುದು ಸೇರಿ ಹಲವು ಭರವಸೆಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ನವೆಂಬರ್ 12 ರ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಸ್ಪರ್ಧಿಸುತ್ತಿದ್ದು, ಚುನಾಯಿತ ಶಾಸಕರು ಮತ್ತು ಪಕ್ಷದ ಹೈಕಮಾಂಡ್‌ನೊಂದಿಗೆ ಚರ್ಚಿಸಿದ ನಂತರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂದು ಪಕ್ಷ ಹೇಳಿದೆ. ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಮತ್ತು ಐದು ವರ್ಷಗಳ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಧನಿ ರಾಮ್ ಶಾಂಡಿಲ್ ಆರೋಪಿಸಿದ್ದಾರೆ. ಇದು ಕೇವಲ ಚುನಾವಣಾ ಪ್ರಣಾಳಿಕೆ ಅಲ್ಲ, ಆದರೆ ಹಿಮಾಚಲ ಪ್ರದೇಶದ ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಸಿದ್ಧಪಡಿಸಿದ ದಾಖಲೆಯಾಗಿದೆ ಎಂದು ಶಾಂಡಿಲ್ ಹೇಳಿದರು. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸಮ್ಮುಖದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಟ್ಯಾಕ್ಸಿ ಚಾಲಕರಿಗೆ ನಾಮಮಾತ್ರದ ದರದಲ್ಲಿ ಸಾಲ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದು, ಪರ್ಮಿಟ್ ಅವಧಿಯನ್ನು 10 ವರ್ಷದಿಂದ 15 ವರ್ಷಕ್ಕೆ ಹೆಚ್ಚಿಸುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ, ಮಾಜಿ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಸುಖ್ವಿಂದರ್ ಸಿಂಗ್ ಸುಖು ಮತ್ತು ಎಐಸಿಸಿ ಕಾರ್ಯದರ್ಶಿಗಳಾದ ತೇಜಿಂದರ್ ಪಾಲ್ ಬಿಟ್ಟು ಮತ್ತು ಮನೀಶ್ ಚತ್ರತ್ ಸೇರಿದಂತೆ ಇತರರು ಇದ್ದರು.