ವಿಮಾ ನಿಯಂತ್ರಣ ಪ್ರಾಧಿಕಾರದ ಉದ್ದೇಶಿತ ನೂತನ ನಿಯಮಗಳು ವಿಮಾ ಪ್ರತಿನಿಧಿಗಳಿಗೆ ಹಾಗೂ ವಿಮಾ ರಂಗಕ್ಕೆ ತೀವ್ರ ಮಾರಕವಾಗಲಿದೆ ಎಂದು ಎಲ್.ಐ.ಸಿ.ಅಭಿವೃದ್ಧಿ ಅಧಿಕಾರಿಗಳ ಸಂಘದ ಬೆಂಗಳೂರು ವಿಭಾಗದ ಜಂಟಿ ಕಾರ್ಯದರ್ಶಿಗಳಾದ ಎಸ್.ಆನಂದ ಮೂರ್ತಿ ಹಾಗೂ ಆರ್.ಪ್ರಸನ್ನ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ತುಮಕೂರು ಸಂಸದ ಜಿ.ಎಸ್.ಬಸವರಾಜು ಅವರಿಗೆ ಎಲ್ಐಸಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಮುಖಂಡರು ಮನವಿ ಸಲ್ಲಿಸಿ ಮೇಲಿನ ಅಂಶದ ಬಗ್ಗೆ IRDA ಚೇರ್ಮನ್ ಹಾಗೂ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆಯುವಂತೆ ಮನವಿ ಮಾಡಿದರು.
ಇಡೀ ದೇಶದಾದ್ಯಂತ 25 ಲಕ್ಷಕ್ಕೂ ಹೆಚ್ಚು ವಿಮಾ ಪ್ರತಿನಿಧಿಗಳು ಕೆಲಸ ನಿರ್ವಹಿಸುತ್ತಿದ್ದು, ಕೇವಲ ಒಂದು ಪಾಲಿಸಿ ಮಾಡಲು ಪ್ರತಿ ದಿನ 7/8 ಜನರನ್ನು , ಕನಿಷ್ಠ ನಾಲ್ಕೈದು ಬಾರಿ ಆದರೂ ಭೇಟಿ ನೀಡಿ, ವಿಮಾ ರಕ್ಷಣೆಯನ್ನು ಒದಗಿಸುತ್ತಿದ್ದಾರೆ. ನಂತರ ರಿನಿವಲ್ ಪ್ರೀಮಿಯಂ ಕಟ್ಟಿಸಲು ಸಂಪರ್ಕಿಸಿ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಲು ಪ್ರಯತ್ನ ಪಡುತ್ತಾರೆ ಎಂದು ವಿವರಿಸಿದರು.
ಕೋವಿಡ್ ನ ಸಮಯದಲ್ಲಿ ತಮ್ಮ ಜೀವಭಯವನ್ನು ಬಿಟ್ಟು, ವಿಮಾ ಪ್ರತಿನಿಧಿಗಳು ಜನರಿಗೆ ವಿಮಾ ರಕ್ಷಣೆ ನೀಡಲು ಹಾಗೂ ಕ್ಲೈಮ್ ಪಾವತಿಸಲು ನೆರವಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ವಿಮಾ ನಿಯಂತ್ರಣ ಪ್ರಾಧಿಕಾರ ಅವರಿಗೆ ನೀಡುವ ಕಮಿಷನ್ ಅನ್ನು ಮ್ಯಾನೇಜ್ಮೆಂಟ್ ವೆಚ್ಚದೊಳಗೆ ಸೇರಿಸಲು ವಿಮಾ ಕಂಪನಿಗಳಿಗೆ ಸೂಚಿಸಿದೆ. ಇದು ವಿಮಾ ಪ್ರತಿನಿಧಿಗಳ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಸಂಸದರಿಗೆ ಮನವರಿಕೆ ಮಾಡಿದರು.
ಇದು ದೇಶದಲ್ಲಿ ನಿರುದ್ಯೋಗ ಪ್ರಮಾಣವು ಇನ್ನೂ ಹೆಚ್ಚಾಗಲು ಕಾರಣವಾಗಲಿದೆ. ಉದ್ದೇಶಿತ ಬಿಮಾ ಸುಗಮ ವ್ಯವಸ್ಥೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತುಮಕೂರು ಶಾಖೆ 1ರ ಅಧ್ಯಕ್ಷ ಎಂ.ಎಸ್. ಭಟ್, ಕಾರ್ಯದರ್ಶಿ ಚಂದ್ರಶೇಖರಯ್ಯ, ತುಮಕೂರು ಶಾಖೆ 2 ರ ಅಧ್ಯಕ್ಷ ಎಸ್.ಕೆ.ಗಿರಿರಾಜು, ಕಾರ್ಯದರ್ಶಿ ಸತ್ಯ ಚಿದಾನಂದ , ಕೊರಟಗೆರೆ ಶಾಖೆಯ ದಿವಾಕರ್, ತಿಪಟೂರು ಶಾಖೆಯ ಎಸ್.ಜಿ.ಎಸ್.ಪ್ರಸನ್ನ,
ತುಮಕೂರಿನ ಅಭಿವೃದ್ಧಿ ಅಧಿಕಾರಿಗಳಾದ ಎಸ್. ಜಿ.ಭಟ್, ಸಿದ್ದರಾಮ ಪ್ರಸನ್ನ , ದಯಾನಂದ ಸ್ವಾಮಿ, ಅರುಣ್ ಪವಾರ್,
ಸಚಿನ್, ಮುರಳಿ, ಹಿಮಾಂಶು ಕುಮಾರ್ ಮತ್ತು ಮುನಿರಾಜು ಇತರರು ಇದ್ದರು.