Monday, September 16, 2024
Google search engine
Homeಮುಖಪುಟತುರ್ತು ಸಂದರ್ಭದಲ್ಲಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಅಗತ್ಯವಿಲ್ಲ - ಸಚಿವ ಡಾ.ಸುಧಾಕರ್

ತುರ್ತು ಸಂದರ್ಭದಲ್ಲಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಅಗತ್ಯವಿಲ್ಲ – ಸಚಿವ ಡಾ.ಸುಧಾಕರ್

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಯಾವುದೇ ತುರ್ತು ಆರೋಗ್ಯ ಸೇವೆ ಅಗತ್ಯವಿದ್ದಲ್ಲಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಇತರೆ ಯಾವುದೇ ದಾಖಲಾತಿಗಳು ಅಗತ್ಯ ಇರುವುದಿಲ್ಲ ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.

ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ, ಬೇಜಾಬ್ದಾರಿತನದಿಂದಾಗಿ ಹೆರಿಗೆಗೆ ಬಂದ ಗರ್ಭಿಣಿಗೆ ತಾಯಿ ಕಾರ್ಡ್ ಇಲ್ಲ ಎಂಬ ನೆಪವೊಡ್ಡಿ ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ್ದರಿಂದ ಮನೆಯಲ್ಲಿ ಸಹಜ ಹೆರಿಗೆಯಾಗಿ ತಾಯಿ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದ ಬೆನ್ನಲ್ಲೆ ರಾತ್ರಿಯೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಈ ಪ್ರಕರಣ ಸಂಬಂಧ ಅಗತ್ಯ ಮಾಹಿತಿ ಪಡೆದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ತುರ್ತು ಪರಿಸ್ಥಿತಿಯಲ್ಲಿ ರೋಗಿಯ ರಾಷ್ಟ್ರೀಯತೆ, ಜಾತಿ, ವರ್ಗ, ಆರ್ಥಿಕ ಸ್ಥಿತಿಯನ್ನು ಅವಲಂಬಿಸಬಾರದು. ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು ಸಂಕಟವನ್ನು ನಿವಾರಿಸುವುದು ವೈದ್ಯರು, ಶುಶ್ರೂಷಕರು ಮತ್ತು ಇತರೆ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಪರಿಸ್ಥಿತಿಯಲ್ಲಿ ರೋಗಿಯ ಯಾವುದೇ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಬಾರದು ಎಂಬ ಉದ್ದೇಶದಿಂದ ನಿಯಮವನ್ನು ಮರು ಜಾರಿಗೊಳಿಸುತ್ತಿದ್ದೇವೆ ಎಂದರು.

ಇಂತಹ ಘಟನೆಗಳು ಮರುಕಳಿಸಿದರೆ ಇಲಾಖೆಯು ಸಂಬಂಧಪಟ್ಟ ಅಧಿಕಾರಿ ಅಥವಾ ನೌಕರರನ್ನು ಸೇವೆಯಿಂದ ಅಮಾನತ್ತುಗೊಳಿಸುವ ಜತೆಗೆ ಸೇವೆಯಿಂದಲೇ ವಜಾಗೊಳಿಸುವುದು ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡುವ ಬಗ್ಗೆ ನಮ್ಮ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

ವೃತ್ತಿ ಧರ್ಮ ಯಾರು ಪಾಲಿಸುವುದಿಲ್ಲ ಅಂತಹವರ ವಿರುದ್ಧ ವಜಾ ಮಾಡುವ ಕಠಿಣ ಕ್ರಮವನ್ನು ಇಲಾಖೆ ಕೈಗೊಳ್ಳಲಿದೆ. ಇದನ್ನು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ಅಧಿವೇಶನದಲ್ಲಿ ಇದನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ನವಜಾತ ಶಿಶುಗಳು ಹಾಗೂ ತಾಯಿ ಸಾವನ್ನಪ್ಪಿರುವುದು ನನಗೆ ಬಹಳ ನೋವು ತಂದಿದೆ. ಈವರೆಗೆ ಪೊಲೀಸರು ಆಕೆಯ ಸಂಬಂಧಿಕರನ್ನು ಹುಡುಕಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಆಕೆಯ ದೂರದ ನೆಂಟರೊಬ್ಬರು ಬರುವುದಾಗಿ ತಿಳಿಸಿದ್ದಾರೆ. ಅವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದರು.

ನಾನು ಗರ್ಭಿಣಿ ಮಹಿಳೆ ಜಿಲ್ಲಾಸ್ಪತ್ರೆಗೆ ಬಂದ ಸಂದರ್ಭದಲ್ಲಿ ನಡೆದಿರುವ ಘಟನಾವಳಿಯನ್ನು ಸಿಸಿಟಿವಿಯನ್ನು ನೋಡಿದ್ದೇನೆ. ಆಕೆ ಬಂದು ಶುಶ್ರೂಷಕರನ್ನು ಮೊದಲು ಭೇಟಿ ಮಾಡಿದ್ದಾಳೆ. ಅವರು ಮಾತನಾಡಿರುವ ಬಗ್ಗೆ, ವೈದ್ಯೆ ಉಷಾ ಅವರು ಸಹ ಚಿಕಿತ್ಸೆ ನೀಡಲು ಸ್ಪಂದಿಸದೇ ಇರುವ ಬಗ್ಗೆಯೂ ನೋಡಿದ್ದೇನೆ. ಈ ಪ್ರಕರಣ ಸಂಬಂಧ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸಹ ಶೋಕಾಸ್ ನೋಟಿಸ್ ನೀಡಿದ್ದೇವೆ. ಅವರು 24 ಗಂಟೆಯೊಳಗೆ ಅವರ ಪ್ರತಿಕ್ರಿಯೆ ನೀಡದೇ ಇದ್ದಲ್ಲಿ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular