ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಎಸ್.ಪಿ. ಮುದ್ದಹನುಮೇಗೌಡ ಮತ್ತು ನಟ ಶಶಿಕುಮಾರ್ ಇಂದು ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷಕ್ಕೆ ಬರಮಾಡಿಕೊಂಡರು.
ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ, ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್ ಸೇರಿದಂತೆ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.
ಮುದ್ದಹನುಮೇಗೌಡ ತುಮಕೂರು ಜಿಲ್ಲೆಯ ನಾಯಕರಾಗಿ, ಶಾಸಕರಾಗಿ, ಸಂಸದರಾಗಿ ವಿಧಾನಸಭೆಯಲ್ಲಿ ಹಾಗೂ ಸಂಸತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದ ಸಜ್ಜನ ರಾಜಕಾರಣಿ ಮತ್ತು ಜನಪರ ದ್ವನಿ ಎತ್ತುವ ರಾಜಕಾರಣಿಯಾಗಿ ಸಾರ್ವಜನಿಕ ಜೀವನದಲ್ಲಿರುವವರು ಬಿಜೆಪಿಗೆ ಸೇರ್ಪಡೆಯಾಗಿರುವುದು ನಮ್ಮ ಪಕ್ಷಕ್ಕೆ ಬಹು ದೊಡ್ಡ ಬಲ ಬಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಶಶಿಕುಮಾರ್ ಅವರು ಮಾಜಿ ಸಂಸದರಾಗಿದ್ದು ಬಿಜೆಪಿಯಲ್ಲಿದ್ದರೆ ಗೌರವ ಎಂದು ಅರಿತು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಚಿತ್ರನಟರಾಗಿ ಹೆಸರು ಮಾಡಿದ್ದಾರೆ. ಸಾಕಷ್ಟು ಆಭಿಮಾನಿ ಬಳಗವನ್ನು ಹೊಂದಿದ್ದಾರೆ. ಎಸ್.ಟಿ. ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ಸೇರ್ಪಡೆ ಪಕ್ಷಕ್ಕೆ ಶಕ್ತಿ ಬಂದಿದೆ. ಸೇವಾ ದಳದಲ್ಲಿ ಕಾರ್ಯನಿರ್ವಹಿಸಿದ ಹನುಮಂತರಾವ್ ಬಿಜೆಪಿ ಸೇರಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್ ಕುಮಾರ್ ಸದಾಕಾಲ ಜನಪರ ಕೆಲಸ ಮಾಡಿದ್ದು, ಅವರೊಂದಿಗೆ ಸುಮಾರು 35 ವರ್ಷಗಳ ಬಾಂಧವ್ಯ ಇದೆ. ವಿಶೇಷವಾಗಿ ದೀನದಲಿತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದಾರೆ. ಎಸ್.ಸಿ ಸಮುದಾಯಕ್ಕೆ ಸೇರಿದ್ದು ಮೌಲಿಕ ರಾಜಕಾರಣಕ್ಕೆ ಬೆಲೆ ದೊರೆತಿದೆ ಎಂದು ಸಿಎಂ ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥ್ ನಾರಾಯಣ, ಎಸ್.ಟಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಸಿ.ಪಿ.ಯೋಗೇಶ್ವರ್ ಇತರರು ಇದ್ದರು.