ಗುಜರಾತ್ ವಿಧಾನಸಭೆಯ ಚುನಾವಣೆಯು ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ನಡೆಯಲಿದ್ದು ಡಿಸೆಂಬರ್ 8ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಕೇಂದ್ರ ಚುನಾವಣ ಆಯೋಗ ತಿಳಿಸಿದೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ವಿಧಾನಸಭೆಯ 182 ಸ್ಥಾನಗಳ ಪೈಕಿ ಮೊದಲ ಹಂತದಲ್ಲಿ 89 ಮತ್ತು ಎರಡನೇ ಹಂತದಲ್ಲಿ 93 ಸ್ಥಾನಗಳಿಗೆ ಮತದಾನ ನಡೆಯಲಿದೆ ಎಂದು ಹೇಳಿದ್ದಾರೆ.
ಈ ವರ್ಷ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 34 ಸಾವಿರಕ್ಕೂ ಹೆಚ್ಚು ಮತಕೇಂದ್ರಗಳನ್ನು ತೆರೆಯಲಾಗುವುದು. ಒಟ್ಟು 51 ಸಾವಿರಕ್ಕೂ ಹೆಚ್ಚು ಮತಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ಮೋರ್ಬಿ ಸೇತುವೆ ದುರಂತದ ಸಂತ್ರಸ್ತರಿಗೆ ಸಂತಾಪ ಸೂಚಿಸಿದರು. ಕನಿಷ್ಠ 135 ಮಂದಿ ಸಾವಿಗೆ ಕಾರಣವಾದ ದುರಂತದಿಂದಾಗಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲು ವಿಳಂಬವಾಗಿದೆ ಎಂದು ಹೇಳಿದರು.
ಗುಜರಾತ್ ವಿಧಾನಸಭೆಯ ಅವಧಿ ಫೆಬ್ರವರಿ 18, 2023ರಂದು ಕೊನೆಗೊಳ್ಳುತ್ತದೆ. ಚುನಾವಣಾ ವೇಳಾಪಟ್ಟಿಯ ಘೋಷಣೆಯೊಂದಿಗೆ ಮಾದರಿ ನೀತಿ ಸಂಹಿತೆ ರಾಜ್ಯದಲ್ಲಿ ಜಾರಿಗೆ ಬರುತ್ತದೆ. ಚುನಾವಣೆಗೆ ಮುನ್ನ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 160 ಕಂಪನಿಗಳನ್ನು ನಿಯೋಜಿಸಲಾಗಿದೆ.