ತೆಲಂಗಾಣದ ಮೊಯಿನಾಬಾದ್ ಫಾರ್ಮ್ ಹೌಸ್ ಘಟನೆಯನ್ನು ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಮತ್ತು ಈ ಪ್ರಕರಣವನ್ನು ಸಿಬಿೈಗೆ ವಹಿಸಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ಒತ್ತಾಯಿಸಿದ್ದಾರೆ.
ನೂರು ಕೋಟಿ ಆಮಿಷವೊಡ್ಡಿ ಟಿಆರ್.ಎಸ್ ಪಕ್ಷದ ನಾಲ್ವರು ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸಿದೆ ಎಂದು ಟಿಆರ್.ಎಸ್. ಆರೋಪಿಸಿತ್ತು. ಮತ್ತು ಬಿಜೆಪಿ ಮುಖಂಡರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತ್ತು. ಇದಕ್ಕೆ ಕಿಶನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಂಪಲ್ಲಿಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, ಮುನುಗೋಡ ಉಪಚುನಾವಣೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಪ್ರಗತಿ ಭವನದಲ್ಲಿ ಟಿಆರ್.ಎಸ್ ರೂಪಿಸಿದ ನಾಟಕ ಇದು. ಟಿಆರ್.ಎಸ್ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ರೆಡ್ಡಿ ಹೇಳಿದರು.
ಕೇವಲ ನಾಲ್ವರು ಶಾಸಕರು ಬಿಜೆಪಿ ಸೇರಿದ ಮಾತ್ರಕ್ಕೆ ಟಿಆರ್.ಎಸ್ ಸರ್ಕಾರವನ್ನು ಬೀಳಿಸಲು ಸಾಧ್ಯವೇ? ಈ ನಾಲ್ವರು ಶಾಸಕರು ತಮ್ಮ ಕ್ಷೇತ್ರದ ಜನರ ಬೆಂಬಲವನ್ನು ಅನುಭವಿಸುತ್ತಾರೆಯೇ ಮತ್ತು ಅವರು ಪ್ರಾಮಾಣಿಕರೇ? ಟಿಆರ್.ಎಸ್ ಶಾಸಕರನ್ನು ಖರೀದಿಸಲು ಬಿಜೆಪಿಗೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸೇರಲು ಬಯಸುವವರನ್ನು ನಿರ್ವಹಿಸಲು ಸೇರ್ಪಡೆ ಸಮಿತಿಯನ್ನು ಬಿಜೆಪಿ ಹೊಂದಿದ್ದು, ಸೇರಲು ಬಯಸುವ ಯಾವುದೇ ಶಾಸಕರು ತಮ್ಮ ಪಕ್ಷಕ್ಕೆ ರಾಜಿನಾಮೆ ನೀಡಬೇಕು ಎಂಬ ನಿಯಮ ಪಕ್ಷದಲ್ಲಿದೆ ಎಂದು ಸಚಿವರು ತಿಳಿಸಿದರು.