ಶ್ರೀಪಾದ ಭಟ್
ದಲಿತ ರಾಜಕಾರಣಿಯಾಗಿ ಲಿಂಗಾಯತರ ಪ್ರಾಬಲ್ಯದ ಪ್ರದೇಶದಿಂದ 9 ಬಾರಿ ಸತತವಾಗಿ ಗೆದ್ದು ಬಂದ ಮಲ್ಲಿಕಾರ್ಜುನ ಖರ್ಗೆಜೀ ಶಿಕ್ಷಣ, ಸಾರಿಗೆ, ಕಂದಾಯ ಸಚಿವರಾಗಿ ದಕ್ಷತೆಯಿಂದ, ಜನಪರ ಕಾಳಜಿಯಿಂದ ಕೆಲಸ ಮಾಡಿದ್ದಾರೆ. ಕೇಂದ್ರ ಕಾರ್ಮಿಕ ಮಂತ್ರಿಗಳಾಗಿ ಅಲ್ಪಕಾಲಾವಧಿಯಲ್ಲಿ ಇಎಸ್ ಐ ವ್ಯವಸ್ಥೆಯನ್ನು ಉತ್ತಮಗೊಳಿಸಿ ಕಾರ್ಮಿಕ ಸ್ನೇಹಿಯಾಗಿ ರೂಪಿಸಿದರು. ಮತ್ತು ಇಲ್ಲಿನ ರಾಜಕಾರಣದ ಸಂಕೀರ್ಣ ಮಿತಿಗಳಿಂದ ಖರ್ಗೆಯವರೂ ಹೊರತಾಗಿಲ್ಲ.
ಆದರೂ ಸಹ ಜನ ‘ ಬಿಡಪ , ಖರ್ಗೆ ಸಮನ್ವಯ ರಾಜಕಾರಣಿ, ಅಂದರಿಕೂ ಮಂಚಿವಾಳ್ಳುವಾಗಿ ರಾಜಕೀಯ ಮಾಡಿದರು, ಮೇಲ್ಜಾತಿಯವರಿಗೂ ಅಪ್ತವಾಗಿದ್ಜರು’ ಎಂದು ಟೀಕಿಸುತ್ತಾರೆ.
ಆದರೆ ಜಾತಿ ಬಲವಿಲ್ಲದ, ಹುಲುಸಾದ ರಾಜಕಾರಣದ ನೆಲೆಯಿಲ್ಲದ ಮತ್ತು ‘ನಾವಿದ್ದೇವೆ ನೀವು ಮುನ್ನುಗ್ಗಿ’ ಎಂದು ಭರವಸೆ ಕೊಡುವ ಮನಸ್ಸುಗಳಿಲ್ಲದ , ಮುಖ್ಯವಾಗಿ ಮೀಸಲು ಕ್ಷೇತ್ರವಾಗಿದ್ದರೂ ಮೇಲ್ಜಾತಿ ಮತಗಳೇ ನಿರ್ಣಾಯಕವಾಗಿದ್ದ ಆ ಬೆಂಗಾಡಿನಲ್ಲಿ ಖರ್ಗೇಜಿ ತಲೆ ಗಟ್ಟಿಯಿದೆಯೆಂದು ವೀರಾವೇಶದ ರಾಜಕಾರಣ ಮಾಡಿ ಸೋತು ಮುಗ್ಗರಿಸಬೇಕಿತ್ತು.
ಆಗಲೇ ಈ ವಿಘ್ನ ಸಂತೋಷಿಗಳಿಗೆ ಖೀರು ಕುಡಿದಷ್ಟು ಕುಶಿ.
ಆದರೆ ಪಕ್ಷನಿಷ್ಠರಾಗಿದ್ದರೂ, ಅನ್ಯಾಯದ ವಿರುದ್ಧ ಬಂಡಾಯವೇಳದಿದ್ದರೂ ಸಹ ಆತ್ಮ ಘನತೆಯ, ಸ್ವಾಭಿಮಾನದ ರಾಜಕಾರಣ ಮಾಡಿದ ಖರ್ಗೇಜಿ ಕುರಿತು ಮೇಲ್ಜಾತಿ, ಬ್ರಾಹ್ಮಣ ಮಾಧ್ಯಮಗಳಿಂದ ‘ಆದ್ರೂ ಬಿಡ್ರಿ, ಅತ್ಲಾಗೆ ‘ ಅಂತ ಕಟಿಪಿಟಿ ಬೇರೆ.
‘ಏನ್ರೀ ಅದು ಅತ್ಲಾಗೆ’ ಅಂತ ಕೇಳಿ ನೋಡಿ, ‘ಇರಲಿ ಬಿಡ್ರಿ’ ಅಂತ ನುಣುಚಿಕೊಳ್ಳುತ್ತಾರೆ.
ದಲಿತರಾಗಿ ಎದೆ ಸೆಟೆಸಿ ರಾಜಕಾರಣ ಮಾಡಿದರೆ ‘ಇವನಿಗ್ಯಾಕೆ ಈ ಉಸಾಬರಿ, ಸುಮ್ಮನಿರಬಾರದೆ’ ಎಂಬ ಬಿಟ್ಟಿ ಉಪದೇಶ (ಬಸವಲಿಂಗಪ್ಪನವರನ್ನು ನೆನೆಸಿಕೊಳ್ಳಿ)
‘ಹಾಳಾಗಿ ಹೋಗ್ರಿ , ನನ್ನ ಪಾಡಿಗೆ ನಾನು ವಿವೇಕಯುತವಾಗಿ ಬದುಕುವೆ’ ಎಂದರೆ ‘ಇವ ರಥ ಹಿಂದಕ್ಕೆ ಎಳಿತಾನಲ್ಲಪ’ ಎನ್ನುವ ವ್ಯಂಗ್ಯ.
ಈ ಜನರ ತಗಲೂಫಿತನದ ಕೆಂಡದ ಮಳೆಯಲ್ಲಿ ದಲಿತರು ಬೇಯುತ್ತಲೇ ಇದ್ದಾರೆ..
ಲೇಖಕರು, ಬರಹಗಾರರು, ಸಾಮಾಜಿಕ ಕಾರ್ಯಕರ್ತರು.