ಟೆಂಪೋ ಟ್ರಾವೆಲ್ ಮತ್ತು ಕೆಎಸ್.ಆರ್.ಟಿಸಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 9 ಮಂದಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯ ಬಾಣಾವರದಲ್ಲಿ ನಡೆದಿದೆ.
ಮೃತರಲ್ಲಿ ನಾಲ್ವರು ಮಹಿಳೆಯರು, ನಾಲ್ವರು ಮಕ್ಕಳು ಮತ್ತು ಓರ್ವ ಪುರುಷ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಹಾಸನ ಜಿಲ್ಲೆಯ ಲೀಲಾವತಿ ರಮೇಶ್, ವಂದನಾ ಗಂಗಣ್ಣ, ದೊಡ್ಡಯ್ಯ ಪಾಪಣ್ಣ, ಚೈತ್ರ ಶ್ರೀನಿವಾಸ್, ಧ್ರುವ, ತನ್ಮಯಿ, ಸಂಪತ್, ಭಾರತಿ ದೊಡ್ಡಯ್ಯ ಗುರುತಿಸಲಾಗಿದೆ.
ಟೆಂಪೋ ಟ್ರಾವೆಲ್ ನಲ್ಲಿ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಅಘಾತದಲ್ಲಿ ಇನ್ನೂ ಐವರು ತೀವ್ರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಟಿಟಿ ವಾಹನದಲ್ಲಿದ್ದವರು ಧರ್ಮಸ್ಥಳಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ಐದಾರು ಕಿಲೋ ಮೀಟರ್ ನಲ್ಲಿ ಮನೆಗೆ ಸೇರುವ ಮೊದಲೇ ಈ ದುರಂತ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 69ರಲ್ಲಿ ದುರಂತ ಸಂಭವಿಸಿದ್ದು ಲಾರಿ ಬಸ್ ಮಧ್ಯೆ ಸಿಲುಕಿ ಟ್ರಾವಲ್ ವಾಹನ ಸಂಪೂರ್ಣ ಜಖಂಗೊಳಿಸಿದೆ.
ಘಟನಾ ಸ್ಥಳದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ನಡೆಯುತ್ತಿರುವ ಸಂಬಂಧ ಯಾವುದೇ ನಾಮಫಲಕ ಹಾಕಿರಲಿಲ್ಲ. ಹೀಗಾಗಿ ಚತುಷ್ಪಥದ ಒನ್ ವೇಯಲ್ಲಿ ಹಾಲಿನ ಟ್ಯಾಂಕರ್ ನುಗ್ಗಿ ಬಂತು. ಎದುರುಗಡೆಯಿಂದ ಟ್ಯಾಂಕರ್ ಬರುತ್ತಿದ್ದುದು ಟಿಟಿ ಚಾಲಕನಿಗೆ ಗೊತ್ತಾಗಲಿಲ್ಲ. ನಂತರ ಟ್ಯಾಂಕರ್ ವಾಹನ ನೋಡಿ ಟಿಟಿ ವಾಹನವನ್ನು ಎಡಕ್ಕೆ ತಿರುಗಿಸಿದ್ದು ಈ ದುರಂತಕ್ಕೆ ಕಾರಣವಾಗಿದೆ.