ತುಮಕೂರು ತಾಲ್ಲೂಕು ಹೆಬ್ಬಾಕ ಅಮಾನಿಕೆರೆ ಕೋಡಿ ಬೀಳಲು ಅರ್ಧ ಅಡಿ ಬಾಕಿಇದ್ದು ಇದರ ಗಂಗಾಪೂಜೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೋಲೀಸರು ಅಡ್ಡಿಪಡಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾದ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಒಂದೂವರೆ ದಶಕದ ಬಳಿಕ ಹೆಬ್ಬಾಕ ಕೆರೆ ಸಂಪೂರ್ಣ ಭರ್ತಿಯಾಗಿದ್ದು ಗಂಗಾಪೂಜೆ ನಡೆಸಲು ಗ್ರಾಮಸ್ಥರು ಸಿದ್ದತೆ ನಡೆಸಿದ್ದರು. ಆದರೆ ಇದಕ್ಕೆ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹೆಬ್ಬಾಕ ಅಮಾನಿಕೆರೆ ದಶಕದ ನಂತರ ಕೋಡಿ ಬಿದ್ದಿದ್ದು ಇದನ್ನು ಕಣ್ತುಂಬಿಕೊಳ್ಳಲು ಮತ್ತು ಗಂಗಾಪೂಜೆ ನಡೆಸಲು ಗ್ರಾಮಸ್ಥರು ಸಂಭ್ರಮದ ಸಿದ್ದತೆ ಮಾಡಿಕೊಂಡಿದ್ದು ಮಹಾನಗರ ಪಾಲಿಕೆ ತಡೆಯೊಡ್ಡಿದೆ. ಇದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರನ್ನು ಮುಂದಿಟ್ಟುಕೊಂಡು ಹೆಬ್ಬಾಕ ಕೆರೆಯ ನೀರನ್ನು ಬುಗುಡನಹಳ್ಳಿ ಕೆರೆಗೆ ಬಿಡುತ್ತಿರುವ ಮಹಾನಗರ ಪಾಲಿಕೆಯ ಕ್ರಮವನ್ನು ಹೆಬ್ಬಾಕ ಗ್ರಾಮಸ್ಥರು ಖಂಡಿಸಿದ್ದಾರೆ.
ಮಹಾನಗರ ಪಾಲಿಕೆ ಹೆಬ್ಬಾಕ ಕೆರೆಯ ನೀರನ್ನು ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಬಿಡುವುದನ್ನು ವಿರೋಧಿಸಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಹೆಬ್ಬಾಕ ಸುತ್ತಮುತ್ತಲ ಎಲ್ಲಾ ಕೆರೆಗಳು ಕೋಡಿ ಬಿದ್ದಿದ್ದು ಅಕ್ಕಪಕ್ಕದ ಗ್ರಾಮಸ್ಥರು ಗಂಗಾಪೂಜೆ ನೆರವೇರಿಸಿದ್ದಾರೆ. ಆದರೆ ನಮ್ಮ ಗ್ರಾಮದ ಕೆರೆ ಕೋಡಿ ಬೀಳುವುದನ್ನು ಏಕೆ ತಡೆಯುತ್ತೀರಿ ಎಂದು ಗ್ರಾಮಸ್ಥರು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.


