ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ದ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಮುರುಘಾ ಶ್ರೀಗಳು 19 ವರ್ಷದ ಮತ್ತೊಂದು ಬಾಲಕಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ.
ದೂರಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಚಿತ್ರದುರ್ಗ ಜಿಲ್ಲಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಚಿತ್ರದುರ್ಗದ ವಕೀಲರು ಈ ಸಂಬಂಧ ಅಕ್ಟೋಬರ್ 6ರಂದು ದೂರು ನೀಡಿದ್ದಾರೆ.
ಸುಮಾರು 19 ವರ್ಷ ವಯಸ್ಸಿನ ಈ ಬಾಲಕಿಯ ಮೇಲೆ ಮುರುಘಾ ಶರಣರು ಮತ್ತು ಇನ್ನಿತರರು ನಿರಂತರ ಆರೇಳು ವರ್ಷಗಳ ಕಾಲ ಅಮಾನವೀಯ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಮಗೆ ತಿಳಿಸಿವೆ ಎಂದು ದೂರಿನ ಪ್ರತಿಯಲ್ಲಿ ತಿಳಿಸಿದ್ದಾರೆ.
ಹೀಗೆ ದೌರ್ಜನ್ಯಕ್ಕೆ ಒಳಗಾದ ಬಾಲಕಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಆದ್ದರಿಂದ ಈ ಬಾಲಕಿಯೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಆಕೆಯಲ್ಲಿ ಮಾನಸಿಕ ಸ್ಥೈರ್ಯ ತುಂಬಬೇಕು. ಆಕೆಗೆ ರಕ್ಷಣೆ ಒದಗಿಸಬೇಕು ಎಂದು ದೂರಿನಲ್ಲಿನ ಮಾಹಿತಿಯನ್ನು ಉಲ್ಲೇಖಿಸಿ ನಾನು ಗೌರಿ.ಕಾಂ ವರದಿ ಮಾಡಿದೆ.