Monday, September 16, 2024
Google search engine
Homeಇತರೆಕಾಂತಾರ ಬಿಂಬಿಸುವ ಸಾಮಾಜಿಕ ಸೆಣಸಾಟವೂ, ತುಳುನಾಡಿನ ಪರಂಪರೆಯೂ....

ಕಾಂತಾರ ಬಿಂಬಿಸುವ ಸಾಮಾಜಿಕ ಸೆಣಸಾಟವೂ, ತುಳುನಾಡಿನ ಪರಂಪರೆಯೂ….

ಹರ್ಷಕುಮಾರ್ ಕುಗ್ವೆ

(ಸೂಚನೆ: ಈ ಬರೆಹವು ಮಹಾಪ್ರಾಣಗಳನ್ನು ಬಳಸದ ಎಲ್ಲರ ಕನ್ನಡದಲ್ಲಿದೆ)

ಬಹುಶಃ ಕಾಂತಾರ ಸಿನಿಮಾ ಕುರಿತು ನನ್ನ ಈ ಬರೆಹ ಎಲ್ಲರೂ ಬರೆದ ಮೇಲೆ ಬರೆಯುತ್ತಿರುವ ಬರೆಹ ಅನಿಸುತ್ತದೆ. ಇಂದು ನಮ್ಮ ಸಹೋದ್ಯೋಗಿಗಳ ಜೊತೆಗೆ ಹೋಗಿ ಕಾಂತಾರ ನೋಡಿ ಬರುವ ದಾರಿಯಲ್ಲೇ ಒಂದು ಮಾತು ಬರೆದು ಇಲ್ಲಿ ಹಾಕಿದ್ದೆ. “ಕಾಂತಾರ: ಮೊದಲು ಸಿನಿಮಾ ನೋಡಿ” ಎಂದು. ಇದಕ್ಕೆ ಬೇರೆ ಬೇರೆಯ ತರದ ಪ್ರತಿಕ್ರಿಯೆಗಳು ಬಂದವು. ನಾನು ಯಾಕೆ ಈ ಮಾತು ಹೇಳಿದೆ ಎಂದರೆ, ನಮ್ಮ ತುಳುನಾಡಿನ ಸಂಸ್ಕೃತಿಯ ಒಂದು ಬಹಳ ಮುಕ್ಯವಾದ ಆಚರಣೆ ಮತ್ತು ನಂಬುಗೆಯನ್ನು ಬಹುಶಃ ಈ ಸಿನಿಮಾ ತೋರಿಸಿದಷ್ಟು ವರ್ಣರಂಜಿತವಾಗಿ ಮತ್ತು ತೀವ್ರವಾಗಿ ಬೇರಾವ ಸಿನಿಮಾವೂ ತೋರಿಸಿಲ್ಲ. ಸಿನಿಮಾ ನೋಡುವವರಿಗೆ ಇದೊಂದು ಹಿಂದೆಂದೂ ಸಿಗದ ಅನುಬವವೂ ಹೌದು, ತಿಳುವಳಿಕೆಯೂ ಹೌದು. ನಾಡಿನ ಅದರಲ್ಲೂ ತುಳುನಾಡಿನ ಸಾಮಾಜಿಕತೆ ಮತ್ತು ಜನಸಂಸ್ಕೃತಿಗಳ ಒಳಗಿರುವ ಕೂಡುಕಟ್ಟು ಮತ್ತು ತಿಕ್ಕಾಟಗಳ ಬಗ್ಗೆ ಆಲೋಚಿಸಲು, ಚಿಂತಿಸಲು ಕಾಂತಾರ ಒಂದು ಒಳ್ಳೆಯ ಸರಕನ್ನೂ ಒದಗಿಸುತ್ತದೆ. ಹೀಗಾಗಿ ಎಲ್ಲರೂ ನೋಡಲೇಬೇಕಾದ ಸಿನಿಮಾ ಎಂದು ಈಗಲೂ ಹೇಳುತ್ತಿದ್ದೇನೆ.

ಸಿನಿಮಾದ ಹಂದರದ ಕುರಿತು ಬಹಳಶ್ಟು ಸಂಗತಿಗಳನ್ನು ಈಗಾಗಲೇ ಬಿನ್ನ ಬಿನ್ನ ದನಿಯಲ್ಲಿ ಚರ್ಚಿಸಿದ್ದರೂ ನನ್ನ ಕಣ್ಣೋಟಕ್ಕೆ ದಕ್ಕಿದ ಸಂಗತಿಗಳನ್ನು ಹೇಳಲೇಬೇಕು. ಒಂದು ಸಂಸ್ಕೃತಿ ಮತ್ತು ನಂಬುಗೆಯ ಸಂಗತಿಗಳ ಜೊತೆಜೊತೆಗೇ ಒಂದು ಪ್ರದೇಶದ ಸಾಮಾಜಿಕ ತಿಕ್ಕಾಟವನ್ನೂ, ಸೆಣಸಾಟವನ್ನೂ ಹೇಳುವ ಕಾರಣಕ್ಕೆ ಈ ಸಿನಿಮಾ ಮುಖ್ಯವಾಗುತ್ತದೆ.

ತುಳುನಾಡಿನ ಒಂದು ಕಾಡು ಅತವಾ ಕಾಡಿನಲ್ಲಿರುವ ಊರು ಇಲ್ಲಿ ಅದರ ಹೆಸರು ಕಾಡುಬೆಟ್ಟು. ಕಾಡುಬೆಟ್ಟಿನ ಕಾಡಿನ ರೌದ್ರತೆ ಊರಿನಲ್ಲಿಯೂ ಇರುತ್ತದೆ. ಆದರೆ ಅದು ಮರಳು ಮಾಡುವ ಕಾಡಿನ ಹಸಿರಿನಿಂತೆ ತಣ್ಣಗಿನ ಕ್ರೌರ್ಯದಂತೆ! ಸಿನಿಮಾದ ನಾಯಕ ಶಿವ (ರಿಶಬ್‌ ಶೆಟ್ಟಿ) ಬೂತ ಕಟ್ಟುವ ಒಂದು ಪರಿಶಿಷ್ಟ ಜಾತಿಯವನು. ಒಬ್ಬ ದಲಿತ. ಅವನು ಮನೆಯೊಳಗೆ ಕಾಲಿಟ್ಟದ್ದಕ್ಕೆ ʼನಾಯಿ ಮನೆಯನ್ನು ಮೈಲಿಗೆ ಮಾಡಿತುʼ ಎಂದು ಪಂಚಗವ್ಯ ಸಿಂಪಡಿಸಿ ಶುದ್ದ ಮಾಡುವ ಒಂದು ಸೊ ಕಾಲ್ಡ್‌ ಮೇಲ್ಜಾತಿಯನು ಶಿವನ ದಣಿ (ಅಚ್ಯುತ). ಈ ದಣಿಯ ತಂದೆ ದೊಡ್ಡ ಶ್ರೀಮಂತ ದಶಕಗಳ ಹಿಂದೆ ಮುಂಬೈಯಿಂದ ಬಂದು ಊರಿನ ಕಾಡು ಬೂಮಿಯೆಲ್ಲಾ ತನ್ನದೇ ಎಂದು ಸೊಕ್ಕಿನಿಂದ ಮಾತಾಡಿ ಪಂಜುರ್ಲಿ ಬೂತಕ್ಕೆ ಅಪಮಾನಿಸಿದ್ದಾಗ, ಆ ಬೂತ ಕಾಡಿನಲ್ಲಿ ಮಾಯವಾಗಿದ್ದಲ್ಲದೇ ಅದರ ನುಡಿಯಂತೆ ಆ ಶ್ರೀಮಂತ ಕೋರ್ಟ್‌ ಮೆಟ್ಟಿಲಲ್ಲೇ ರಕ್ತ ಕಾರಿ ಸತ್ತಿದ್ದ. ಅವನ ಕಾಲಾನಂತರ ಪಂಜುರ್ಲಿಗೆ ಬೂತ ಕಟ್ಟುತ್ತಿದ್ದುದು ಶಿವನ ಚಿಕ್ಕಪ್ಪನ ಮಗ ಗುರುವ. ಈಗ ತನ್ನ ಅಪ್ಪನಿಗಾದ ಕೇಡನ್ನೂ ಲೆಕ್ಕಿಸದೇ ಊರಿನ ಜಮೀನಿನ ಮೇಲೆ ಕಣ್ಣಿಟ್ಟು ಕುಂತವ ದಣಿ. ಇವನದು ಬಾಯಲ್ಲಿ ಮಗ, ಮಗ ಹೊಟ್ಟೆಯಲ್ಲಿ ಬಗಬಗ ಎಂಬ ಬುದ್ದಿ. ಪಾರಂಪರಿಕ ಫ್ಯೂಡಲ್‌ ದರ್ಬಾರಿನ ಕೊನೆಯ ಕೊಂಡಿ ಈತ. ಯಾಕೆಂದರೆ ಇವನ ಮಗ ಬುದ್ದಿಮಾಂದ್ಯ. ಆದರೂ ʼಜೀವನ ಇರೋದು ಸಾಗಿಸೋದಕ್ಕಲ್ಲ, ಅನುಬವಿಸೋದಕ್ಕೆʼ ಎಂಬುದು ಇವನ ಪಿಲಾಸಪಿ.

ಈ ನಡುವೆ ಅರಣ್ಯ ಇಲಾಕೆಯ ಅದಿಕಾರಿ (ಕಿಶೋರ್)‌ ಚಾಚೂ ತಪ್ಪದೇ ಕಾನೂನು ಪಾಲಿಸುವ ನಿಶ್ಟಾವಂತ. ಆದರೆ ಅವನ ಕಾನೂನುಗಳೋ ಅಪ್ಪಟ ಜನ ವಿರೋದಿಯಾಗಿರುವಂತವು. ಕಾಡಿನ ಜನರಲ್ಲೇ ವಿಲನ್ನುಗಳಾಗಿಸುವ ಅವನ ನೀತಿ ನಡೆ ಅಲ್ಲಿ ಸಂಗರ್ಶವನ್ನು ಏರ್ಪಡಿಸುತ್ತವೆ. ʼಹೊರಗಿನವನಾದ ಅವನಿಗೆ ಜನರ ಅಬಿಪ್ರಾಯವಾಗಲೀ, ಜನರು ನಂಬಿದ ಬೂತದ ಇಂಗಿತವಾಗಲೀ ಅರಿವಾಗುವುದು ಸುಲಬವಲ್ಲ. ಸಿನಿಮಾದ ಮುಕ್ಕಾಲು ಬಾಗದವರೆಗೂ ಕಾಡುಬೆಟ್ಟುವಿನ ಜನರು ಮತ್ತು ಶಿವನ ಮುಖ್ಯ ಶತ್ರುಗಳಾಗಿ ಸೆಣಸಾಟ ನಡೆಯುವುದು ಈ ಅರಣ್ಯ ಇಲಾಕೆಯ ಅದಿಕಾರಿಯೊಂದಿಗೇ. ಆದರೆ ಯಾವಾಗ ಕಾಡಬೆಟ್ಟು ನೆಲವೆಲ್ಲಾ ಬೂಮಾಲೀಕನ ಪಾಲಾಗುವ ಹಂತ ತಲುಪುತ್ತದೆಯೋ ಆಗ ಅವರೆಲ್ಲರ ಎದುರಾಳಿಯಾಗಿ ನಿಲ್ಲುವುದು ದಣಿ ಮಾತ್ರ.

ಕಾಡುಬೆಟ್ಟು ಜನರು ಬೂತವನ್ನು (ದೈವ) ನಂಬುತ್ತಾರೆ. ಬೂತಕ್ಕೆ ಕೋಲ ನಡೆದರೆ ಆ ಬೂಮಿಯನ್ನು ಜನರ ಸುಪರ್ದಿಯಲ್ಲೇ ಇರುವಂತೆ ಮಾಡಿ ಜನರನ್ನು ಕಾಯುವುದೇ ಪಂಜುರ್ಲಿ ಬೂತ. ಆದರೆ ವೈದಿಕ ನಂಬುಗೆಯ ದಣಿಗೆ ಬೂತದ ಬಗ್ಗೆ ಅಲ್ಪಸ್ಪಲ್ಪ ಬಯವಿದೆಯೇ ಹೊರತು ನಂಬುಗೆಯೇನಿಲ್ಲ. ಮೇಲಾಗಿ ಅವನು ಅನುಬವಿಸುತ್ತಿರುವ ಸಾಮಾಜಿಕ ಸ್ತಾನಮಾನ ಅವನಿಗೆ ಆ ಬೂತ ಕಟ್ಟುವ ಸಮುದಾಯದ ಜನರನ್ನೂ ನಾಯಿಗಿಂತ ಕಡೆಯಾಗಿ ಕಾಣುವಂತೆ ಮಾಡುತ್ತದೆ. ಪಂಜುರ್ಲಿ ಬರುವ ದಲಿತನಾದ ಗುರುವನನ್ನು ಅವನು ಕಾಣುವುದು ಹೀಗೆಯೇ. ಹೀಗಾಗಿಯೇ ಅವನು ದಲಿತ ಗುರುವನನ್ನು ಕಾಡಿನಲ್ಲಿ ಕರೆದುಕೊಂಡು ಹೋಗಿ ಡೀಲ್‌ ಕುದುರಿಸಲು ಪ್ರಯತ್ನ ನಡೆಸುವುದು. ಆ ಸಮೃದ್ದ ಕಾಡಿನ ಐದೆಕರೆ ಜಾಗವನ್ನು ನಿನಗೇ ಕೊಟ್ಟು ಬಿಡುತ್ತೇನೆ ಎಂಬ ಆಮಿಶವನ್ನೂ ಒಡ್ಡುತ್ತಾನೆ. ಆದರೆ ಬೂತ ಕಟ್ಟುವ ಗುರುವ ಸ್ವಾರ್ತಿಯಲ್ಲ, ಅವನ ಜಾತಿಗೂ ಅಂತಹ ಸ್ವಾರ್ತದ ಪರಂಪರೆಯಿಲ್ಲ. ತನ್ನ ಮೇಲೆ ಪಂಜುರ್ಲಿ ಬೂತ ಬರುತ್ತದೆ, ತಾನು ಹೀನ ಕೆಲಸ ಮಾಡಬಾರದು ಎಂಬ ವಿವೇಕವನ್ನೂ ಇಟ್ಟುಕೊಂಡವನು ಗುರುವ. ಅದಕ್ಕಿಂತ ಮೇಲಾಗಿ ಆ ಊರಿನ ತಳಸಮುದಾಯವನಾಗಿ ಸಮಷ್ಟಿ ಹಿತಕ್ಕೆ ಬದ್ದತೆ ಇಟ್ಟುಕೊಂಡವನು. ದಣಿ ನೀಡಿದ ಹೀನ ಆಮಿಷಕ್ಕೆ ಬಲಿಯಾಗಿ ದೈವದ ಹಿಂದಿನ ನಡೆಯನ್ನು ಉಲ್ಲಂಗಿಸುವುದಾಗಲೀ, ತನ್ನ ಜನರ ಹಿತವನ್ನು ಬಲಿ ಕೊಡುವುದಾಗಲೀ ಅವನಿಂದ ಆಗದ ಕೆಲಸ. ʼಗುರುವ ನಿನ್ನ ಮೇಲೆ ಬರುವ ದೈವ ಸ್ವಲ್ಪ ಹೊತ್ತಿನದು. ಅದು ಇಳಿದ ಮೇಲೆ ನೀನು ಗುರುವʼ ಎಂದು ದಣಿ ಹೇಳಿದಾಗ ಆಗಾತಕ್ಕೊಳಗಾಗುವ ಗುರುವ ʼದಣಿ ನಿಮ್ಮಿಂದ ಈ ಮಾತು ಬರುತ್ತದೆ ಎಂದುಕೊಂಡಿರಲಿಲ್ಲʼ ಎಂದು ದಣಿಯ ಕೋರಿಕೆಯನ್ನು ನಯವಾಗಿ ತಿರಸ್ಕರಿಸುತ್ತಾನೆ.

ಮುಂದೆ ನಡೆಯುವ ಮಾರಾಮಾರಿಯಲ್ಲಿ ಗುಳಿಗ ಬೂತ ಶಿವನನ್ನು ಆವರಿಸಿಕೊಳ್ಳುತ್ತದೆ. ಇಡೀ ಸಿನಿಮಾದ ಅಮೋಗವೆನಿಸುವ ದೃಶ್ಯ ಇದೇ. ಈ ಹಂತದಲ್ಲಿ ʼಅಸುರನ್‌ʼ ಸಿನಿಮಾದ ದೃಶ್ಯಗಳು ಕಣ್ಮುಂದೆ ಬಂದು ಮಾಯವಾಗುತ್ತವೆ. ಒಂದು ಬಾವತೀವ್ರತೆಯಲ್ಲಿ ರಿಶಬ್‌ ಶೆಟ್ಟಿ ಈ ದೃಶ್ಯದಲ್ಲಿ ಅಬಿನಯಿಸುವಾಗ ರಾಜ್‌ ಬಿ ಶೆಟ್ಟಿ ಅವರೇ ಇದನ್ನು ನಿರ್ದೇಶಿಸಿದ್ದರು ಎನ್ನಲಾಗುತ್ತಿದೆ. ಆದರೆ ಒಂದು ಸಾಮಾಜಿಕ ಸೆಣಸಾಟದ ರೂಪದ ಹೊಡೆದಾಟ ಮತ್ತು ಒಂದು ಪರಂಪರಾನುಗತ ನಂಬುಗೆಗಳು ಅಬಿನಯವಾಗಿ ಜರುಗುವ ಈ ದೃಶ್ಯದ ತೀವ್ರತೆ ಸಿನಿಮಾ ನೋಡುವ ಪ್ರತಿಯೊಬ್ಬರನ್ನೂ ಹಲವು ದಿನಗಳ ಕಾಲ ಕಾಡುವಂತದ್ದು. ಇದಕ್ಕಾಗಿ ರಿಶಬ್‌ ಮತ್ತು ರಾಜ್‌ ಬಿ ಶೆಟ್ಟಿ ಹಾಗೂ ಸಿನೆಮೆಟೋಗ್ರಾಪರ್‌ ಎಲ್ಲರೂ ಅಬಿನಂದನೆಗೆ ಅರ್ಹರಾಗಿದ್ದಾರೆ.

ಸಿನಿಮಾಗಳಲ್ಲಿ ಸಾಮಾಜಿಕ ಸಂಗರ್ಶಗಳಿರಬೇಕು, ಅದುವೇ ಕಲೆಯೊಂದು ಸಮಾಜದ ವಾಸ್ತವಗಳಿಗೆ ಕನ್ನಡಿಯಾಗುವ ಬಗೆ ಎಂದು ನಂಬುವ ನನ್ನಂತವರಿಗೆ ಈ ಸಿನಿಮಾ ಮೇಲ್ನೋಟಕ್ಕೇ ಇಶ‍್ಟವಾಗಬೇಕು. ಆಗುತ್ತದೆ ಕೂಡಾ. ಆದರೆ ಕೆಲವು ಸೂಕ್ಷ್ಮಗಳನ್ನು ಅವಶ್ಯವಾಗಿ ಗಮನಿಸಬೇಕಾಗಿದೆ. ಕೋಲಗಳಲ್ಲಿ ಬೂತ ಕಟ್ಟುವ ಜನರು ವಂಶಾನುಗತವಾಗಿ ಪರಿಶಿಷ್ಟ ಜಾತಿಯ ಜನರು. ವಾಸ್ತವಿಕ ಜಗತ್ತಿನಲ್ಲಿ ಇವರೆಲ್ಲರೂ ಸಮಾಜದ ಇತರ ಪ್ರಬಲ ಜಾತಿಗಳ ಜನರೆದುರು ತಗ್ಗಿ ಬಗ್ಗಿಯೇ ಬದುಕುವಂತವರು. ತೇಟ್‌ ಗುರುವನಂತೆ. ಆದರೆ ಬೂತ ಮೈಮೇಲೆ ಬಂದಾಗ ಮಾತ್ರ ಮೇಲ್ಜಾತಿಯವರಿಂದಲೂ ಗೌರವಾದರಕ್ಕೆ ಒಳಗಾಗುವವರು. ತುಳುನಾಡಿನ ಅತ್ಯಂತ ವಿಶಿಷ್ಟ ಸಾಂಸ್ಕೃತಿಕ ವಿದ್ಯಮಾನವಿದು. ಬೂತಗಳನ್ನು ಆವಾಹಿಸಿಕೊಳ್ಳುವ ಪಾತ್ರಿಗಳು ಟ್ರಾನ್ಸ್‌ (ಮನೋಪರಿವರ್ತನೆ) ಗೆ ಒಳಗಾಗಿ ಸುಪ್ತಪ್ರಜ್ಞೆಯಲ್ಲಿ ಮಾತನಾಡುವಾಗ ಪೀಳಿಗೆಯಿಂದ ಪೀಳಿಗೆಗೆ ಬಂದಂತಹ ತಮ್ಮ ಪರಂಪರೆ ಮತ್ತು ಸಾಮಾಜಿಕತೆಯ ಅರಿವಿನೊಂದಿಗೇ ಮಾತಾಡುತ್ತವೆಂಬುದನ್ನು ಗಮನಿಸಬಹುದು. ಈ ಸಿನಿಮಾದ ಹೆಚ್ಚುಗಾರಿಕೆ ಏನೆಂದರೆ ಮೇಲ್ಜಾತಿಯ ದಬ್ಬಾಳಿಕೆಯನ್ನು ಎದುರಿಸಲು ತಳಸಮುದಾಯದ ಕತಾನಾಯಕ ಶಿವ ಎದುರಾಳಿಯನ್ನು ಎದುರಿಸಲು ತನ್ನ ಪರಂಪತೆಯ ಬೂತ ನೆರವಿಗೆ ಬರುವುದು. ಈ ವಿಶಯದಲ್ಲಿ ಸಿನಿಮಾದ ಕತೆ, ಅಬಿನಯ ಎಲ್ಲವೂ perfect.

ಆದರೆ ಈ ಸಿನಿಮಾವನ್ನು ಕಟ್ಟಿಕೊಡುವಲ್ಲಿ ಕೆಲವು ಗಂಬೀರ ಪ್ರಮಾದಗಳೂ ಆಗಿವೆ.

ತುಳು ನಾಡಿನ ಬೂತಗಳಿಗೂ ವೈದಿಕರ ನಂಬಿಕೆ ಸಂಪ್ರದಾಯಗಳಿಗೂ ಯಾವುದೇ ಸಂಬಂದವೇ ಇಲ್ಲದಿದ್ದರೂ ಪಂಜುರ್ಲಿ ಬೂತವನ್ನು ವೈದಿಕ ಸಂಸ್ಕೃತಿಯ ಬಾಗವಾಗಿಸುವ ಪ್ರಯತ್ನವನ್ನಂತೂ ರಿಶಬ್‌ ಶೆಟ್ಟಿ ಮಾಡಿದ್ದಾರೆ. ಬೂತಾರಾದನೆಯ ಇತಿಹಾಸ ಗೊತ್ತಿರುವ ಮತ್ತು ಬೂತಗಳು ಎಲ್ಲಿಂದ ಯಾವ ಪರಂಪರೆಯಿಂದ ಒಡಮೂಡಿದವು ಎಂಬ ಅರಿವಿರುವ ಯಾರೂ ಇಂತಹ ಯಡವಟ್ಟು ಮಾಡಬಾರದು. ಕಾಂತಾರ ಟೈಟಲ್‌ ನಲ್ಲಿ ತೋರಿಸುವ ವೈದಿಕರ ಓಂ ಗೂ ಬೂತಾರಾದನೆಗೂ ಸಂಬಂದವೇನು? ದೈವಗಳು ಎಂದು ಕರೆಸಿಕೊಳ್ಳುವ ತುಳುನಾಡಿನ ಬೂತಗಳಿಗೂ ಬೂತ ಕಟ್ಟುವ ಜನರಿಗೂ ಬ್ರಿಟಿಶರು ಎಶ್ಟರ ನಟ್ಟಿಗೆ ಏಲಿಯೆನ್‌ ಗಳಾಗಿದ್ದರೋ ವೈದಿಕ ಸಂಸ್ಕೃತಿಯ ಜನರೂ ಮತ್ತವರ ಸಂಸ್ಕೃತಿಯೂ ಅಶ್ಟೇ ಏಲಿಯೆನ್‌ ಗಳಾಗಿದ್ದರು ಮತ್ತು ಅವರ ವೈದಿಕ ಸಂಸ್ಕೃತಿಯೂ ಅಶ್ಟೇ ಏಲಿಯೆನ್‌ ಸಂಸ್ಕೃತಿಯಾಗಿದೆ ಎನ್ನುವ ಅರಿವು ʼಕಾಂತಾರʼ ರಚಿಸಿದವರಿಗೆ ಇರದಿದ್ದುದು ದುರಂತ. ತುಳುನಾಡಿನ ಬೂತಗಳು ಶಿವನ ಗಣಗಳು ಎಂಬಂತೆ ಬಿಂಬಿಸುವ ಪರಿಪಾಟ ಶುರುವಾಗಿದ್ದು ತೀರಾ ಇತ್ತೀಚೆಗೆ ಬನ್ನಂಜೆ ಗೋವಿಂದಾಚಾರ್ಯರಂತವರ ವೈದಿಕ ವಾಙ್ಮಯದ ಮೂಲಕವಶ್ಟೇ. ಅಸಲಿಗೆ ಶಿವನೇ ವೈದಿಕ ದೇವರಲ್ಲ. ಇನ್ನು ಬೂತಗಳು ವೈದಿಕ ಹಿಂದೂ ದರ್ಮದ ಬಾಗವಾಗಲು ಹೇಗೆ ಸಾದ್ಯ? ಇನ್ನು ಬೂತಾರಾದನೆಯಲ್ಲಿ ಬೂತ ಕಟ್ಟಿದ ಪಾತ್ರಿ ಟ್ರಾನ್ಸ್‌ಗೆ ಹೋಗುವಂತೆ ಸಹಾಯ ಮಾಡುವುದು ಸಿನಿಮಾದಲ್ಲಿ ತೋರಿಸುವಂತೆ ಯಾವುದೋ ಸಂಸ್ಕೃತ ಶ್ಲೋಕವಲ್ಲ. ಬದಲಿಗೆ ಕೋಲದಲ್ಲಿ ನುಡಿಸುವ ತೆಂಬರೆ ಮತ್ತಿತರ ವಾದ್ಯಗಳು ಹಾಗೂ ಹೆಣ್ಮಕ್ಕಳು ಹಾಡುವ ಪಾಡ್ದನಗಳು. ಇವು ಅಪ್ಪಟ ಅವೈದಿಕತೆಯ ನಡುವಿನಿಂದ ಒಡಮೂಡಿದ ಸಂಸ್ಕೃತಿಯ ಸಂಗತಿಗಳು.

ಕಾಂತಾರ ಸಿನಿಮಾ ಯಾವುದೋ ಜನಪದ ಕ್ರೀಡೆಯನ್ನು ತೋರಿಸುವ ಇಲ್ಲವೇ ಆಪ್ತಮಿತ್ರ ಸಿನಿಮಾದಲ್ಲಿ ದೆವ್ವ ಮೆಟ್ಟಿಕೊಳ್ಳುವುದನ್ನು ತೋರಿಸುವಂತಹ ಸಿನಿಮಾ ಅಲ್ಲ. ಇದು ಒಂದಿಡೀ ಸಮುದಾಯದ ನಂಬಿಕೆಯ ಆಚರಣೆಯನ್ನೇ ಅಬಿನಯಿಸಿ ತೋರಿಸುವ ಸಿನಿಮಾ. ಇದುವರೆಗೆ ಬೂತ ಅತವಾ ದೈವಗಳನ್ನು ನಾಟಕ, ಯಕ್ಷಗಾನ ಅತವಾ ಸಿನಿಮಾಗಳಲ್ಲಿ ನಟಿಸಿ ತೋರಿಸುವ ವಿಶಯದಲ್ಲಿ ಬೂತ ಕಟ್ಟುವ ಪಾತ್ರಿಗಳು ಅತವಾ ಅಂತಹ ಸಮುದಾಯಗಳು ಒಪ್ಪಿಗೆ ನೀಡಿದ ಉದಾಹರಣೆಗಳಿಲ್ಲ. ಬದಲಿಗೆ ಅಂತಹ ಸಂದರ್ಬದಲ್ಲಿ ಇದಕ್ಕೆ ಬೂತದ ಕೋಲದ ನಟನೆಗೆ ತೀವ್ರ ವಿರೋದ ಎದುರಾದ ಹಲವು ಸಂದರ್ಬಗಳಿವೆ. ಬೂತಗಳು ಇಂತಹುದಕ್ಕೆ ಅವಕಾಶ ನೀಡವು. ಹಾಗಾದರೆ ಈಗ ಒಂದು ಕಮರ್ಶಿಯಲ್‌ ಸಿನಿಮಾ ಮಾಡಲು ರಿಶಬ್‌ ಶೆಟ್ಟಿ ಮತ್ತು ಟೀಂ ಬೂತ ಮೈಮೇಲೆ ಬರುವುದನ್ನು ಅಬಿನಯಿಸಿದ್ದಕ್ಕೆ ದೈವ ನಂಬಿಗೆಯಲ್ಲಿ ಒಪ್ಪಿಗೆ ಇದೆಯೇ? ಬಹುಶಃ ಹೀಗೊಂದು ವಿರೋದ ಬರಬಹುದು ಎಂದೆಣಿಸಿಯೇ ರಿಶಬ್‌ ಅದೇ ಸಮುದಾಯದ ಪಾತ್ರವೊಂದನ್ನು ನಾಯಕನಾಗಿಸಿದ್ದಾರೆಯೇ? ನಟನೆ ಮತ್ತು ಕಲೆಯ ದೃಷ್ಟಿಯಿಂದ ರಿಶಬ್‌ ಶೆಟ್ಟಿ ಕಾಂತಾರದಲ್ಲಿ ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ದೈವನಂಬಿಗೆಯ ಜನರ ದೃಷ್ಟಿಯಲ್ಲಿ ತಪ್ಪೆಸಗಿಲ್ಲವೆ? ಲಾಬದ ಉದ್ದೇಶಕ್ಕೆ ಜನರ ನಂಬಿಗೆಯ ಆಚರಣೆಯನ್ನು ನಟನೆಯ ಮೂಲಕ ಮರುಸೃಷ್ಟಿಸಲು ನಂಬುಗೆಯಲ್ಲಿ ಅವಕಾಶವಿದೆಯೇ? ಹಾಗೆಯೇ

ಪಂಜುರ್ಲಿ ಬೂತದ ಬಗ್ಗೆ ಪಾಢ್ದನಗಳಲ್ಲಿ ಇರುವುದಕ್ಕೆ ಬಿನ್ನವಾಗಿ ಅದರ ಹಿನ್ನೆಲೆಯನ್ನು ತಿರುಚಿ ಬಿಂಬಿಸಲಾಗುತ್ತಿದೆ ಎಂಬ ಆರೋಪವೂ ಗಂಬೀರವಾದದ್ದು. ಇನ್ನು ಬೂತ ಕಟ್ಟುವ ಸಮುದಾಯಗಳಾದ ಪಂಬದ, ನಲ್ಕೆ, ಪಾಣರಂತ ಸಮುದಾಯಗಳ ಜನರು ಸಿನಿಮಾದಲ್ಲಿ ತೋರಿಸುವಂತೆ ಶಿಕಾರಿ ಮಾಡುವವರಾಗಲೀ, ಕಳ್ಳನಾಟ ಕಡಿಯುವ ದಂದೆಗಳಲ್ಲಿ ತೊಡಗಿದವರಾಗಲೀ ಆಗಿದ್ದಾರೆಯೇ? ವಾಸ್ತವದಲ್ಲಿ ಹಾಗಿಲ್ಲ. ಕೇವಲ ಕಲೆಯ ಲಿಬರ್ಟಿಯಿಂದ ಹೀಗೆ ಸಮುದಾಯಗಳನ್ನು ಅಪರಾದಿ ಸ್ತಾನದಲ್ಲಿ ನಿಲ್ಲಿಸುವ ಹಕ್ಕು ಇವರಿಗಿದೆಯೆ? ಎಂಬ ತಕರಾರೂ ಕೇಳಿಬರುತ್ತದೆ. ಒಂದು ಕಡೆ ಮುಕ್ಯ ಕತೆಯಲ್ಲಿ ಮೇಲ್ಜಾತಿ, ಮೇಲ್ವರ್ಗದ ಬೂಮಾಲೀಕ ಮತ್ತು ಸರ್ಕಾರದ ಕಾನೂನಿನ ವಿರುದ್ದ ತಳಸಮುದಾಯದ ಜನರ ಬಂಡಾಯದ ಕತೆಯಾಗಿ ʼಕಾಂತಾರʼ ಮೂಡಿ ಬಂದಿದ್ದರೂ ಇಂತಹ ತಳಸಮುದಾಯಗಳನ್ನು ಮತ್ತು ಅವರ ಸಂಸ್ಕೃತಿ ಪರಂಪರೆಯನ್ನು ತಪ್ಪಾಗಿ ಸಮಾಜದ ಎದುರು ಬಿಂಬಿಸುವ ಕೆಲಸವೂ ಆಗಿದೆಯಲ್ಲವೇ? ಈ ಸಿನಿಮಾದ ಪ್ಯಾಂಟಸಿಯಲ್ಲಿ ಸಿಗುವ ʼಶಿವʼ ವಾಸ್ತವ ಬದುಕಿನಲ್ಲಿ ಎಲ್ಲೂ ಕಾಣುವುದಿಲ್ಲ. ಈ ಸಿನಿಮಾದಲ್ಲಿ ತಮ್ಮನ್ನು ಬಿಂಬಿಸಲಾದ ಕುರಿತು ಏನಾದರೂ ತಕರಾರು ಇದ್ದರೂ ಬೂತ ಕಟ್ಟುವ ಆ ಸಮುದಾಯಗಳು ಗಟ್ಟಿದನಿಯಲ್ಲಿ ಮಾತಾಡಲೂ ಆಗದಶ್ಟು ಅಂಜಿಕೆಯ ಸಾಮಾಜಿಕ ಚೌಕಟ್ಟಿನಲ್ಲಿ ಅವರಿರುತ್ತಾರೆ. ಇದೇ ಕಟು ವಾಸ್ತವ.

ಲೇಖಕರು : ಸಾಹಿತಿಗಳು, ಚಿಂತಕರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular