Thursday, September 19, 2024
Google search engine
HomeಮುಖಪುಟSC, ST ಸಮುದಾಯದ ಮೀಸಲಾತಿ ಹೆಚ್ಚಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

SC, ST ಸಮುದಾಯದ ಮೀಸಲಾತಿ ಹೆಚ್ಚಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ನ್ಯಾ.ನಾಗಮೋಹನ ದಾಸ್ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಹೆಚ್ಚಿಸಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳು ತಕ್ಷಣ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಎಸ್.ಸಿ /ಎಸ್.ಟಿ ಮೀಸಲಾತಿ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸಬೇಕು ಎಂದು ವಿಧಾನಸೌಧದಲ್ಲಿ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಒತ್ತಾಯಿಸಿದರು.

ನಮ್ಮ ಸರ್ಕಾರ ಇದ್ದಾಗ ರಚನೆಯಾಗಿದ್ದ ನಾಗಮೋಹನ್‌ ದಾಸ್‌ ಅವರ ಸಮಿತಿ 7-2-2020ರಲ್ಲಿ ವರದಿ ನೀಡಿತ್ತು. ವರದಿ ಸಲ್ಲಿಕೆಯಾಗಿ ಎರಡು ವರ್ಷ ಮೂರು ತಿಂಗಳು ಕಳೆದರೂ ಸರ್ಕಾರ ವರದಿ ಜಾರಿಗೆ ಕ್ರಮ ಕೈಗೊಂಡಿರಲಿಲ್ಲ. ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಧರಣಿ ಆರಂಭ ಮಾಡಿ 240 ದಿನಗಳಾಗಿದೆ ಎಂದು ಹೇಳಿದ್ದಾರೆ.

ಎಸ್‌.ಸಿ ಜನಾಂಗದ ಜನಸಂಖ್ಯೆಯಲ್ಲಿ ಏರಿಕೆ ಆಗಿದೆ, ಮೊದಲು ಎಸ್‌.ಸಿ ಜನಾಂಗದಲ್ಲಿ 6 ಜಾತಿಗಳು ಇದ್ದವು. ಈಗ ಅದು 102 ಆಗಿದೆ. ಎಸ್‌.ಟಿ ಯಲ್ಲೂ 6 ಜಾತಿಗಳಿತ್ತು, ಅವು 52ಕ್ಕೆ ಏರಿದೆ. ಈಗ ಎಸ್‌,ಸಿ ಗಳಿಗೆ 15% ಹಾಗೂ ಎಸ್‌,ಟಿ ಗಳಿಗೆ 3% ಮೀಸಲಾತಿ ಇದೆ. ನಾಗಮೋಹನ್‌ ದಾಸ್‌ ಅವರ ವರದಿ ಎಸ್‌.ಸಿ ಮೀಸಲಾತಿಯನ್ನು 15% ಇಂದು 17% ಗೆ ಏರಿಕೆ ಮಾಡಬೇಕು ಹಾಗೂ ಎಸ್‌.ಟಿ ಗಳಿಗೆ 3% ಇಂದ 7% ಗೆ ಮೀಸಲಾತಿ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಿದೆ ಎಂದರು.

2011ರ ಜನಗಣತಿ ಪ್ರಕಾರ ಎಸ್‌.ಸಿ. ಜನಸಂಖ್ಯೆ 17.15% ಇದೆ, ಎಸ್‌.ಟಿ 6.95% ಇತ್ತು, ಈಗ ಸ್ವಲ್ಪ ಏರಿಕೆ ಆಗಿದೆ. ಇದನ್ನೇ ನಾಗಮೋಹನ್‌ ದಾಸ್‌ ಸಮಿತಿ ಆಧಾರವಾಗಿಟ್ಟುಕೊಂಡು ಮೀಸಲಾತಿ ಹೆಚ್ಚಿಸುವಂತೆ ಶಿಫಾರಸು ಮಾಡಿದೆ ಎಂದು ಹೇಳಿದರು.

ಎಸ್.ಸಿ‌ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳವಾಗಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ‌ ಮಾಡಬೇಕಾಗುತ್ತದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಮಾತ್ರ ಅವಕಾಶ ಇದೆ ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಮೀಸಲಾತಿಯನ್ನು 69% ಗೆ ಹೆಚ್ಚಿಸಿ 9ನೇ ಶೆಡ್ಯೂಲ್‌ಗೆ ಸೇರಿಸಲಾಗಿದೆ. ಇದರಿಂದ ಸಂವಿಧಾನಾತ್ಮಕ ರಕ್ಷಣೆ ಸಿಕ್ಕಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿ “ಕೆಲವು ವಿಶೇಷ ಸಂದರ್ಭದಲ್ಲಿ ಮೀಸಲಾತಿಯನ್ನು 50% ಗಿಂತ ಹೆಚ್ಚು ಮಾಡಬಹುದು” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕೇಂದ್ರ ಸರ್ಕಾರ 103ನೇ ತಿದ್ದುಪಡಿ ಮಾಡಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ 10% ಮೀಸಲಾತಿ ನೀಡಿರುವುದರಿಂದ ಮೀಸಲಾತಿ ಪ್ರಮಾಣ 50% ಮೀರಿದೆ ಎಂದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಇರುವುದರಿಂದ ಬಿಜೆಪಿಗೆ ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಸುಗ್ರೀವಾಜ್ಞೆ ಮೂಲಕ ಮೀಸಲಾತಿಯನ್ನು ಹೆಚ್ಚಿಸಿ ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular