ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು ಪ್ರತಿನಿತ್ಯ ಲಕ್ಷಾಂತರ ಮಂದಿ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಕ್ಯತಾ ಯಾತ್ರೆಯಲ್ಲಿ ಸಾರ್ವಜನಿಕರು, ಸಾಹಿತಿಗಳು, ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು, ವೈದ್ಯರು, ಇಂಜಿನಿಯರ್ ಗಳು ಸೇರಿದಂತೆ ಹಲವು ರೀತಿಯ ಜನರು ಭಾಗವಹಿಸುತ್ತಿದ್ದಾರೆ. ಸೋನಿಯಾ ಗಾಂಧಿ ಕೂಡ ಭಾಗವಹಿಸಿ ಪಾದಯಾತ್ರೆ ನಡೆಸಿದ್ದಾರೆ ಎಂದರು.
ಯಾತ್ರೆಯ ಪ್ರಮುಖ ಉದ್ದೇಶ ದೇಶದಲ್ಲಿ ಸಾಮರಸ್ಯ ಕಾಪಾಡುವುದು, ಶಾಂತಿ ಕದಡದಂತೆ ನೋಡಿಕೊಳ್ಳುವುದು, ದೇಶ ವಿಭಜನೆ ಆಗದಂತೆ ನೋಡಿಕೊಳ್ಳುವುದು, ಸಂವಿಧಾನದ ಆಶಯವನ್ನು ಕಾಪಾಡುವುದು ಮತ್ತು ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಆಗಿದೆ ಎಂದು ತಿಳಿಸಿದರು.
ಅಕ್ಬೋಬರ್ 8ರಂದು ತುಮಕೂರು ಜಿಲ್ಲೆಗೆ ಐಕ್ಯತಾ ಯಾತ್ರೆ ಆಗಮಿಸಲಿದೆ. ತುರುವೇಕೆರೆ ತಾಲ್ಲೂಕು ಬಾಣಸಂದ್ರದಲ್ಲಿ ವಾಸ್ತವ್ಯ ಹೂಡಲಿದ್ದು, ಮಾರನೇ ದಿನ ಕೆ.ಬಿ.ಕ್ರಾಸ್ ಮಾರ್ಗವಾಗಿ ಚಿ.ನಾ.ಹಳ್ಳಿ ಮೂಲಕ ಬರಕನಹಾಳ್ ಗೇಟ್ ನಲ್ಲಿ ವಾಸ್ತವ್ಯ, ಮರುದಿನ ಬಳ್ಳಕಟ್ಟೆ, ಹುಳಿಯಾರು ಮೂಲಕ ಕೆಂಕೆರೆ ಪಕ್ಕದ ದೇವರಬೀಳುವಿನಲ್ಲಿ ಮುಕ್ತಾಯಗೊಳ್ಳಲಿದೆ. ಮುಂದೆ ಹಿರಿಯೂರಿಗೆ ತೆರಳಲಿದೆ ಎಂದರು.
ಬಿಜೆಪಿ ನಾಯಕರು ಕಾಂಗ್ರೆಸ್ ಜೋಡೋ ಯಾತ್ರೆ ಎಂದು ಟೀಕಿಸುತ್ತಿದ್ದು, ಇವರಿಗೆ ಇತಿಹಾಸದ ಅರಿವಿಲ್ಲ ಎಂದು ಟೀಕಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಅನೇಕ ನಾಯಕರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಲಿಭಿಸಿದೆ. ಈ ದೇಶಕ್ಕೆ ಅತ್ಯಂತ ಸುವ್ಯವಸ್ಥಿತ ಸಂವಿಧಾನ ಕೊಟ್ಟು ಒಕ್ಕೂಟ ವ್ಯವಸ್ಥೆ ರೂಪಿಸಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್.ರಮೇಶ್, ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಶಾಸಕ ಡಾ.ರಫೀಕ್ ಅಹಮದ್, ಮುಖಂಡರಾದ ಇಕ್ಬಾಲ್ ಅಹಮದ್, ರಾಯಸಂದ್ರ ರವಿಕುಮಾರ್, ಹೊನ್ನಗಿರಿಗೌಡ ಮಾಧ್ಯಮ ಗೋಷ್ಠಿಯಲ್ಲಿದ್ದರು.