Sunday, December 22, 2024
Google search engine
Homeಜಿಲ್ಲೆರಾಜಕೀಯ ಲಾಭಕ್ಕಾಗಿ ಭಾವನಾತ್ಮಕ ವಿಚಾರಗಳ ಬಳಕೆ - ಚಿಂತಕ ಕೆ.ದೊರೈರಾಜ್ ಆತಂಕ

ರಾಜಕೀಯ ಲಾಭಕ್ಕಾಗಿ ಭಾವನಾತ್ಮಕ ವಿಚಾರಗಳ ಬಳಕೆ – ಚಿಂತಕ ಕೆ.ದೊರೈರಾಜ್ ಆತಂಕ

ಭಾವನಾತ್ಮಕ ವಿಚಾರಗಳನ್ನು ರಾಜಕೀಯ ಪಕ್ಷಗಳು ರಾಜಕೀಯ ಲಾಭವನ್ನಾಗಿ ಬಳಸಿಕೊಳ್ಳುತ್ತಿವೆ. ಹಾಗಾಗಿ ದೇಶದ ಜನರು ಎಚ್ಚರದಿಂದ ಇರಬೇಕು ಎಂದು ಜನಪರ ಚಿಂತಕ ಕೆ.ದೊರೈರಾಜು ಹೇಳಿದರು.

ತುಮಕೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಮಹಾತ್ಮಗಾಂಧಿ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮನುಷ್ಯನನ್ನು ಸಮಾನವಾಗಿ ಕಾಣದೆ ಅವಮಾನಿಸುವುದು ಹಿಂಸೆಯಾಗುತ್ತದೆ. ಗಾಂಧೀಜಿಯವರು ಹಿಂಸೆಯನ್ನು ವಿರೋಧಿಸುತ್ತಿದ್ದರು. ಆದರೆ ಇಂದಿನ ಸರ್ಕಾರಗಳು ಹಿಂಸೆಯನ್ನು ಒಂದು ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಜನರನ್ನು ಕೋಮುವಾದದ ಮೂಲಕ ಕೊಲ್ಲಲಾಗುತ್ತಿದೆ. ಆದರೆ ಗಾಂಧಿ ಹಾಕಿಕೊಟ್ಟ ಅಹಿಂಸೆ ಇಂದಿನ ದಿನಮಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಗಾಂಧೀ ಮಾರ್ಗದಲ್ಲಿ ದೇಶ ಕಟ್ಟುವ ಅಗತ್ಯವಿದ್ದು ಸಮಾಜದಲ್ಲಿ ಉಂಟಾಗಿರುವ ಹಿಂಸೆಯನ್ನು ಅಳಿಸಬೇಕಾಗಿದೆ. ಮಾನವೀಯತೆಯ ಸಹಬಾಳ್ವೆ, ಸಮಾಜದ ಕಡೆಗೆ ನಾವೆಲ್ಲ ಹೋಗಬೇಕಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಪ್ರೀತಿ ಮತ್ತು ಸಾಮರಸ್ಯಕ್ಕೆ ಗಾಂಧಿ ಹೆಸರಾಗಿದ್ದರು. ಆದರೆ ಇಂದು ಕೋಮುವಾದಿ ಶಕ್ತಿಗಳು ಗಾಂಧಿಯನ್ನು ಕೊಂದಿದ್ದರೂ ಸಹ ಅವರ ವಿಚಾರಗಳನ್ನು ಆಡಂಬರದಿಂದ ಆಚರಿಸುತ್ತಿದ್ದು ಇದಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

ಕೋಮುವಾದವನ್ನು ಹಿಮ್ಮೆಟ್ಟಿಸದೆ ದೇಶದಲ್ಲಿ ಯಾವುದೇ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿಲ್ಲ. ದಿನಕ್ಕೊಂದು ಕಾನೂನುಗಳನ್ನು ತಂದು ರೈತರು, ಕಾರ್ಮಿಕರ ಮೇಲೆ ಜಾರಿ ಮಾಡುವ ಮೂಲಕ ಹಿಂಸೆ ನೀಡಲಾಗುತ್ತಿದೆ. ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಕೋಟ್ಯಂತರ ರೂಪಾಯಿ ಜಾಹಿರಾತುಗಳನ್ನು ನೀಡಲಾಗುತ್ತಿದೆ. ಕೋಮುವಾದವನ್ನು ಬುಡ ಸಮೇತ ಕಿತ್ತೋಗೆಯಬೇಕು ಎಂದರು.

ಪರಿಸರವಾದಿ ಸಿ.ಯತಿರಾಜು ಮಾತನಾಡಿ, ಸಮಾಜದಲ್ಲಿ ನಡೆಯುವ ಬಹುತೇಕ ಘಟನೆಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬಹುದು. ಆದರೆ ಮತಾಂಧ ಶಕ್ತಿಗಳು ಅದನ್ನು ಕೋಮುಬಣ್ಣ ಬಳಿಯುವ ಮೂಲಕ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಸಮಾಜವನ್ನು ಒಡೆಯುವ ವಿಛಿದ್ರಕಾರಿ ಕೋಮುವಾದಿ ಶಕ್ತಿಗಳನ್ನು ಜನರು ತಿರಸ್ಕರಿಸಬೇಕು. ಗಾಂಧಿ ಹಾಕಿಕೊಟ್ಟ ಮಾರ್ಗದಲ್ಲಿ ಯುವ ಪೀಳಿಗೆ ನಡೆಯಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ 4ನೇ ಹಂತದ ಕೈಗಾರಿಕ ಕ್ರಾಂತಿ ಆಗಿದೆ. ಆದರೆ ಕಾರ್ಮಿಕರಿಗೆ ನೀಡುವಂತ ವೇತನಗಳು ಪರಿಷ್ಕರಣೆ ಆಗಿಲ್ಲ. ಬದಲಾಗಿ ಸಮಸ್ಯೆಗಳು ಹೆಚ್ಚಳವಾಗಿದೆ. ಕೈಗಾರಿಕೆಗಳಿಂದ ಬರುವ ಬಹುತೇಕ ಲಾಭಾಂಶ ಕಾರ್ಪೋರೇಟ್ ಗಳ ಕೈಸೇರುತ್ತಿದೆ. ಈ ರೀತಿಯಾಗಿ ದೇಶದಲ್ಲಿ ಕೈಗಾರಿಕೆ ಮತ್ತು ಕಾರ್ಪೋರೇಟ್ ಸರ್ಕಾರಗಳು ಜನರನ್ನು ಹಿಂಸಿಸುತ್ತಿವೆ ಎಂದು ಹೇಳಿದರು.

ವೇದಿಕೆಯಲ್ಲಿ ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಕೆ.ನರಸಿಂಹಮೂರ್ತಿ, ರೈತ ಸಂಘದ ಶಂಕರಪ್ಪ, ವೆಲ್ಪರ್ ಪಾರ್ಟಿ ಜಿಲ್ಲಾಧ್ಯಕ್ಷ ತಾಜುದ್ದೀನ್ ಶರೀಫ್, ದಲಿತ ಸಂಘಟನೆಯ ಪಿ.ಎನ್.ರಾಮಯ್ಯ, ಜನಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ಪಂಡಿತ್ ಜವಾಹರ್, ಎಸ್.ಎಫ್ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular