Sunday, December 22, 2024
Google search engine
Homeಜಿಲ್ಲೆಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಆಗ್ರಹ

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಆಗ್ರಹ

ಬುಡಕಟ್ಟು ಸಮುದಾಯವಾದ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಬುಡಕಟ್ಟ ಮಹಾಸಭಾ ಮುಖಂಡ ದೊಡ್ಡಮಲ್ಲಯ್ಯ ಒತ್ತಾಯಿಸಿದರು.

ತುಮಕೂರಿನ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲ ಬುಡಕಟ್ಟು ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದ ತುಮಕೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಬೇರೆಬೇರೆ ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಡುಗೊಲ್ಲರದ್ದು ಅಪ್ಪಟ ಬುಡಕಟ್ಟು ಸಮುದಾಯವಾಗಿದೆ. ಹಾಗಾಗಿ ಸರ್ಕಾರ ಈ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕ ಎಸ್. ನಾಗಣ್ಣ ಮಾತನಾಡಿ, ಕಾಡುಗೊಲ್ಲರು, ಕುರುಬರು ಸಹ ತಮ್ಮನ್ನು ಎಸ್.ಟಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಮನ್ನಣೆ ನೀಡಬೇಕು. ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ತೀರ ಹಿಂದುಳಿದಿದೆ ಎಂದರು.

ಕಾಡುಗೊಲ್ಲ ಸಮುದಾಯದಲ್ಲಿ ಯಾರಾದರು ಮುಂದೆ ಬಂದರೆ ಅವರ ಕಾಲು ಎಳೆಯುವ ಪ್ರವೃತ್ತಿ ಇದೆ. ಇದು ಹೋಗಬೇಕು. ಶಿರಾ, ಹಿರಿಯೂರು ಮತ್ತು ಚಳ್ಳಕೆರೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡುಗೊಲ್ಲರು ಇದ್ದು ಅವರಿಗೆ ಈ ಮೂರು ಕಡೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರಮಾ ಮಹಲಿಂಗಪ್ಪ ಮಾತನಾಡಿ, ಕಾಡುಗೊಲ್ಲರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ರಾಜಕೀಯ ಕ್ಷೇತ್ರದಲ್ಲಿ ನಮ್ಮ ಸಮುದಾಯ ತೀರಾ ಹಿಂದೆ ಬಿದ್ದಿದೆ. ಕಾಡುಗೊಲ್ಲರಿಗೆ ರಾಜಕೀಯ ಪ್ರಾತಿನಿಧ್ಯ ನೀಡದ ಕಾರಣ ನಮ್ಮ ಸಮುದಾಯದ ಧ್ವನಿಯಾಗಿ ನಿಲ್ಲಲು ಯಾರೂ ಇಲ್ಲ. ಹಾಗಾಗಿ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.

ಕಾಡುಗೊಲ್ಲರಿಗೆ ಸಿಗುವ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕು. ಗ್ರಾಮೀಣ ಪ್ರದೇಶದಲ್ಲಿ ಗೊಲ್ಲರಹಟ್ಟಿಗಳಲ್ಲಿ ಶೌಚಾಲಯವನ್ನು ನಿರ್ಮಿಸಿದ್ದರೂ ಅದರ ಬಳಕೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲ ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ಮಾಚೇನಹಳ್ಳಿ ಕರಿಯಪ್ಪ, ಜಾತ್ಯತೀತ ಮಾನವ ವೇದಿಕೆಯ ಜಿಲ್ಲಾಧ್ಯಕ್ಷ ಆಡಿಟರ್ ಆಂಜಿನಪ್ಪ, ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನ ಪ್ರಾಂಶುಪಾಲ ಬಿ.ಕರಿಯಣ್ಣ ಹೊನ್ನಗಾನಹಳ್ಳಿ, ಸಹಾಯಕ ಇಂಜಿನಿಯರ್ ಸಿದ್ದಪ್ಪ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular