ಪಿಎಫ್ಐ ಸಂಘಟನೆಯನ್ನು ಕೇವಲ ಬ್ಯಾನ್ ಮಾಡಿದರೆ ಸಾಲದು, ಈ ಸಂಘಟನೆಯ ಎಲ್ಲರನ್ನು ಹುಡುಕಿ ಜೈಲಿಗೆ ಹಾಕಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಸಂಘಟನೆಯಂತೆ ಓವೈಸಿಯ ಎಐಎಂಐಎಂ ಪಕ್ಷವನ್ನು ಕೂಡಾ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್.ಎಸ್.ಎಸ್ ಬ್ಯಾನ್ ಮಾಡಬೇಕು ಎಂದು ಹೇಳಿರುವುದಕ್ಕೆ ಕಿಡಿಕಾರಿದ ಶಿವಣ್ಣ ಆರ್.ಎಸ್.ಎಸ್. ಸಂಘಟನೆ ಸ್ವಾತಂತ್ರ್ಯ ಬರುವ ಮುಂಚೆಯೇ ಹುಟ್ಟಿತ್ತು. ನಾನು ಒಬ್ಬ ಆರ್.ಎಸ್.ಎಸ್ಸಿಗ. ನಾನೇನಾದರೂ ತಪ್ಪು ಮಾಡಿದರೆ ನೀವು ಹೇಳಿದವರ ಮನೆ ಮುಂದೆ ಕಸ ಗುಡಿಸುತ್ತೇನೆ ಎಂದು ಸವಾಲು ಹಾಕಿದರು.
40 ಪರ್ಸೆಂಟ್ ಕಮಿಷನ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕೂಡ ಪಾಯಿಖಾನೆ ತಿನ್ನುವ ಪ್ರವೃತ್ತಿಯವರು, ನಾನು ಕೂಡ ತಿಂದಿದ್ದೇನೆ, ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಹೇಳ್ಬೇಕಿತ್ತು ಎಂದರು.
ಮುಂದಿನ ಚುನಾವಣೆಯಲ್ಲಿ ಸಾಚಾ ಇರುವವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರ್ತೀನಿ ಅಂತ ಹೇಳ್ಬೇಕಿತ್ತು. ಆ ಧೈರ್ಯ ಸಿದ್ದರಾಮಯ್ಯಗೆ ಇಲ್ಲ. ದೇಶ ವಿಭಜನೆಯಾದಾಗ ಇವರೆಲ್ಲಾ ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು. 75 ವರ್ಷದಿಂದ ಒಬ್ಬರಿಗಾದರೂ ನೆಮ್ಮದಿ ಇದೆಯಾ, ಈ ದೇಶದಲ್ಲಿ ಮುಸ್ಲಿಂರ ಏರಿಯಾದಲ್ಲಿ ಹಿಂದೂಗಳು ನೆಮ್ಮದಿಯಾಗಿ ಬದುಕಲು ಆಗುತ್ತಿದೆಯಾ. ವೋಟಿಗಾಗಿ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಆರ್.ಎಸ್.ಎಸ್. ಸಂಘಟನೆಯವನು. ಆರ್‌ಎಸ್‌ಎಸ್ ಯಾರಿಗೂ ಗುಂಡು ಹೊಡೆದಿಲ್ಲ. ಹಾಗಿದ್ದರೆ ಏಕೆ ಬ್ಯಾನ್ ಮಾಡ್ಬೇಕು ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಮುಸ್ಲಿಂ ಸಮುದಾಯದ ವೋಟ್ ಬೇಕು. ಹಾಗಾಗಿ ಬ್ಯಾನ್ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.