Monday, December 23, 2024
Google search engine
Homeಮುಖಪುಟಇಂದು ಧಾರ್ಮಿಕ ಸ್ವಾತಂತ್ರ್ಯ ದಮನಿಸುವ ಪ್ರಯತ್ನ ನಡೆಯುತ್ತಿದೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಇಂದು ಧಾರ್ಮಿಕ ಸ್ವಾತಂತ್ರ್ಯ ದಮನಿಸುವ ಪ್ರಯತ್ನ ನಡೆಯುತ್ತಿದೆ – ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್ ಫರ್ನಾಂಡೀಸ್ ಅವರ ಜೀವನ ಚರಿತ್ರೆ ಕುರಿತಾದ “ದಿ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡೀಸ್” ಪುಸ್ತಕವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಡುಗಡೆಗೊಳಿಸಿ ಮಾತನಾಡಿ, ಜಾರ್ಜ್ ಫರ್ನಾಂಡೀಸ್ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.

ನನ್ನ ರಾಜಕೀಯ ಬದುಕಿನಲ್ಲಿ ಜಾರ್ಜ್ ಫರ್ನಾಂಡಿಸ್ ಅವರಿಗೆ ವಿಶೇಷ ಸ್ಥಾನ ಇದೆ. ಮೈಸೂರಿನಲ್ಲಿ ನಾನು ಕಾನೂನು ವ್ಯಾಸಂಗ ಮಾಡುತ್ತಿದ್ದಾಗ ನನಗೆ ಮೇಸ್ಟ್ರಾಗಿದ್ದವರು ಖ್ಯಾತ ಸಮಾಜವಾದಿ ಮತ್ತು ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಗಳು. ಅವರೇ ನನ್ನನ್ನು ರಾಜಕೀಯಕ್ಕೆ ಎಳೆದು ತಂದವರು. ಅವರ ಒತ್ತಾಯದಿಂದ ನಾನು ಸಮಾಜವಾದಿ ಪಕ್ಷ ಸೇರಿದ್ದೆ. ಅವರ ಮೂಲಕ ನನಗೆ ಜಾರ್ಜ್ ಫರ್ನಾಂಡಿಸ್ ಪರಿಚಯವಾಗಿದ್ದವರು, ಕನ್ನಡಿಗರೇ ಆಗಿದ್ದರಿಂದ ಹೆಚ್ಚು ಆತ್ಮೀಯರಾಗಿದ್ದರು ಎಂದು ಹೇಳಿದರು.

ಜಾರ್ಜ್ ಫರ್ನಾಂಡೀಸ್ ಅವರು ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಕೈಗಾರಿಕಾ ಸಚಿವರಾಗಿದ್ದರು. ಆಗ ಮೈಸೂರಿಗೆ ಒಮ್ಮೆ ಬಂದಿದ್ದರು. ಮೈಸೂರಿನ ತಮ್ಮೆಲ್ಲಾ ಸ್ನೇಹಿತರನ್ನು ಒಟ್ಟಿಗೆ ಸೇರಿಸಿಕೊಂಡು ನಾನು ಕೋಕೋ ಕೋಲಾ ವಿರುದ್ಧ ಹೋರಾಟವನ್ನು ಮಾಡುತ್ತೇನೆ. ಅದಕ್ಕೆ ನಿಮ್ಮ ಬೆಂಬಲ ಬೇಕು ಮತ್ತು ಯಾವತ್ತೂ ಕೊಕೊ ಕೋಲಾ ಕುಡಿಯುವುದಿಲ್ಲ ಎಂದು ಶಪಥ ಮಾಡಬೇಕು’ ಎಂದು ನನಗೆ ಹೇಳಿದ್ದರು ಎಂದು ಸ್ಮರಿಸಿಕೊಂಡರು.

ಜಾರ್ಜ್ ಫರ್ನಾಂಡೀಸ್ ಅವರಲ್ಲಿ ಸೈದ್ಧಾಂತಿಕ ಬದ್ಧತೆ ಇತ್ತು. ಅವರು ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದವರು. ಬರಿಗೈಲಿ ಮುಂಬೈಗೆ ಹೋಗಿ, ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ, ರಾಜಕೀಯವಾಗಿ ಬೆಳೆದವರು. ದಕ್ಷಿಣ ಭಾರತದಿಂದ ಕೇಂದ್ರಕ್ಕೆ ಹೋಗಿ ರಾಜಕೀಯದಲ್ಲಿ ಯಶಸ್ಸು ಕಂಡವರು ಬೆರಳೆಣಿಕೆಯ ಮಂದಿ. ಜಾರ್ಜ್ ಮೊದಲ ಚುನಾವಣೆಯಲ್ಲಿಯೇ ಮುಂಬೈನಲ್ಲಿ ಆಗಿನ ಕಾಂಗ್ರೆಸ್ ಪಕ್ಷದ ಜನಪ್ರಿಯ ನೇತಾರ ಎಸ್ .ಕೆ.ಪಾಟೀಲ್ ಅವರನ್ನು ಮಣಿಸಿ ಗೆಲುವು ಸಾಧಿಸಿ ‘ಜಯಂಟ್ ಕಿಲ್ಲರ್” ಎಂದು ಹೆಸರಾದವರು ಎಂದು ಹೇಳಿದರು.

ನಾನು ಜನತಾ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಬೇಕೆಂದು ಜಾರ್ಜ್ ಬಂದು ಕೇಳಿಕೊಂಡರು. ಚುನಾವಣೆ ನನಗೆ ಹೊಸತು, ಅನುಭವವೂ ಇರಲಿಲ್ಲ, ದುಡ್ಡೂ ಇರಲಿಲ್ಲ. ಸಾಂಕೇತಿಕವಾಗಿ ಸ್ಪರ್ಧಿಸಿ, ಸೋಲು-ಗೆಲುವು ಮುಖ್ಯ ಅಲ್ಲ ಎಂದು ನನ್ನ ಮನ ಒಲಿಸಿ ಚುನಾವಣೆಗೆ ನಿಲ್ಲಿಸಿದರು. ದುಡ್ಡೇನೋ ಸ್ವಲ್ಪ ಕೊಟ್ಟರು, ಅದು ಕೆಲವು ದಿನಗಳಲ್ಲಿ ಖರ್ಚಾಯಿತು. ಅದರ ನಂತರ ಕೈಖಾಲಿ. ಆ ಚುನಾವಣೆಯಲ್ಲಿ ನಾನು ಹೀನಾಯವಾಗಿ ಸೋತು ಬಿಟ್ಟೆ ಎಂದು ತಿಳಿಸಿದರು.

ಅವರು ಭಾರತೀಯ ಜನತಾ ಪಕ್ಷದ ಜೊತೆ ಸೇರಿಕೊಂಡ ನಂತರ ನನಗೂ ಅವರಿಗೂ ರಾಜಕೀಯ ಭಿನ್ನಾಭಿಪ್ರಾಯಗಳಿತ್ತು. ಕೊನೆ ದಿನಗಳಲ್ಲಿ ಸೈದ್ಧಾಂತಿಕವಾಗಿ ನಾವಿಬ್ಬರೂ ಪರಸ್ಪರ ವಿರುದ್ಧ ಧ್ರುವಗಳಲ್ಲಿದ್ದವರು. ಇದರ ಹೊರತಾಗಿಯೂ ನಾವಿಬ್ಬರು ಆಪ್ತ ಸ್ನೇಹಿತರಾಗಿದ್ದೆವು. ಜಾರ್ಜ್ ಸ್ನೇಹಕ್ಕೆ ಬಹಳ ಬೆಲೆ ಕೊಡುವವರು. ಕರ್ನಾಟಕದಲ್ಲಿ ಅವರಿಗೆ ದೊಡ್ಡ ಸ್ನೇಹ ಬಳಗ ಇತ್ತು. ಜೆ.ಎಚ್.ಪಟೇಲ್ ಅವರು ಬಿಜೆಪಿಯನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದರೂ ಗೆಳೆಯ ಜಾರ್ಜ್ ಫರ್ನಾಂಡಿಸ್ ಅವರ ಮಾತಿನಂತೆ ಎನ್ ಡಿ ಎ ಸೇರಿದ್ದರು ಎಂದರು.

ಇಂದು ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂಥಾ ಸಂದಿಗ್ಧ ಸಮಯದಲ್ಲಿ ಜಾರ್ಜ್ ಫರ್ನಾಂಡೀಸ್ ಅವರು ನಮ್ಮೊಂದಿಗೆ ಇರಬೇಕಿತ್ತು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular