ಗಣಪತಿ ಮೆರವಣಿಗೆ ವೇಳೆ ಮಸೀದಿ ಮೇಲೆ ಚಪ್ಪಲಿ ಎಸೆದ ಆರೋಪದ ಮೇರೆಗೆ ನಾಲ್ವರನ್ನು ಬಂಧಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ನಿತೀಶ್ ಕುಮಾರ್, ಭೀಮಣ್ಣ, ಅಶೋಕ್ ಮತ್ತು ಆಂಜನೇಯಲು ಎಂದು ಗುರುತಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದು, ನಾವು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮೆರವಣಿಗೆ ಮಾರ್ಗದಲ್ಲಿ ಗಮನ ಹರಿಸಲು ನಿಯೋಜಿಸಲಾಗಿದ್ದ ಪೊಲೀಸ್ ಅಧಿಕಾರಿಗಳು ಘಟನೆಗೆ ಸಾಕ್ಷಿಯಾಗಿದ್ದರು. ಆದರೆ ಆರಂಭದಲ್ಲಿ ಘಟನೆಗೆ ಕಾರಣರಾದ ವ್ಯಕ್ತಿಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆರೋಪಿಗಳು ಚಪ್ಪಲಿ ಎಸೆದಿರುವ ವಿಡಿಯೋ ವೈರಲ್ ಆದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಸಿರುಗುಪ್ಪ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


