ತುಮಕೂರು ವಿಶ್ವವಿದ್ಯಾಲಯದಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪಿಸುವುದನ್ನು ವಿರೋಧಿಸಿ ಎಸ್‌ಎಫ್‌ಐ ಮತ್ತು ತುಮಕೂರು ಜಿಲ್ಲಾ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್ ಮಾತನಾಡಿ, ತುಮಕೂರು ವಿಶ್ವವಿದ್ಯಾಲಯದಲ್ಲಿ ಈಗಾಗಲೇ ೧೪ ಅಧ್ಯಯನ ಪೀಠಗಳು ಚಾಲ್ತಿಯಲ್ಲಿದ್ದು ಇವುಗಳು ಅನುದಾನದ ಕೊರತೆಯಿಂದ ಸರಿಯಾಗಿ ಕಾರ್ಯನಿರ್ವಹಿಸದೆ ಕುಂಟುತ್ತಾ ಸಾಗುತ್ತಿವೆ. ಅಧ್ಯಯನ ಪೀಠಗಳ ಮೂಲಕ ಯಾರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟಿವೆಯೋ ಅ ಮಹನೀಯರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕಾದುದು ಪೀಠಗಳ ಕರ್ತವ್ಯವಾಗಿದೆ ಎಂದರು.
ಆದರೆ ವರ್ಷಕ್ಕೊಮ್ಮೆ ಮಾತ್ರ ಈ ಅಧ್ಯಯನ ಪೀಠಗಳ ಕಾರ್ಯಕ್ರಮಗಳು ಜರುಗುತ್ತವೆ. ಆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ದೃಷ್ಟಿಯಿಂದ ಈ ಪೀಠಗಳು ನಿರಂತರ ಚಟುವಟಿಕೆಯಿಂದ ಕಾರ್ಯಪ್ರವೃತ್ತವಾಗಬೇಕಾಗಿದೆ. ಆದರೆ ವಿವಿಯು ಇತ್ತೀಚೆಗೆ ಸಾವರ್ಕರ್ ಅಧ್ಯಯನ ಪೀಠ ಪ್ರಾರಂಭ ಮಾಡಲು ಸಿಂಡಿಕೇಟ್ ಅನುಮೋದನೆ ನೀಡಿದೆ ಎಂಬ ಹೇಳಿಕೆಯು ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಈ. ಶಿವಣ್ಣ ಮಾತನಾಡಿ, ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ಯಾವುದೇ ಕೊಡುಗೆಯನ್ನು ನೀಡದೆ ಕೋಮುವಾದಿ ಸಮಾಜವನ್ನು ವಿಭಜಿಸುವ ಜಾತ್ಯತೀತ ನಿಲುವುಗಳನ್ನು ನಾಶಪಡಿಸುವ ಧರ್ಮ-ಧರ್ಮಗಳ ಮಧ್ಯೆ ದ್ವೇಷವನ್ನು ಹರಡುವ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತ, ಗಾಂಧಿ ಸಾವಿಗೆ ಕಾರಣರಾದ ಸಾವರ್ಕರ್ ಅಧ್ಯಯನ ಪೀಠ ವಿದ್ಯಾರ್ಥಿಗಳಿಗೆ ಅಗತ್ಯವಿರುವುದಿಲ್ಲ. ದೇಶಕ್ಕಾಗಿ ದುಡಿದಂತಹ ಸಾವಿರಾರು ಮಂದಿ ದೇಶಪ್ರೇಮಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಹುತಾತ್ಮರಾಗಿದ್ದಾರೆ.
ಭಗತ್ ಸಿಂಗ್, ಸುಭಾಷ್ ಚಂದ್ರಭೋಸ್, ಕಿತ್ತೂರುರಾಣಿ ಚೆನ್ನಮ್ಮ ಇಂತಹ ಮಹನೀಯರಿಂದ ವಿದ್ಯಾರ್ಥಿಗಳು ಹಲವಾರು ವಿಚಾರಗಳನ್ನು ಕಲಿಯುತ್ತಾರೆ. ವಿವಿಗಳು ಇಂತಹ ಪೀಠಗಳನ್ನು ಸ್ಥಾಪನೆ ಮಾಡುವುದರಿಂದ ವಿದ್ಯಾರ್ಥಿಗಳು ದೇಶಪ್ರೇಮ, ದೇಶದ ಅಭಿವೃದ್ಧಿಗಾಗಿ ದುಡಿಯುವುದನ್ನ ಕಲಿಯುತ್ತಾರೆ. ಆದರೆ ಬ್ರಿಟಿಷ್ ಅಧಿಕಾರಿಗಳಿಗೆ ಕ್ಷಮಾಪಣ ಪತ್ರ ಬರೆದುಕೊಟ್ಟು ಜೈಲಿನಿಂದ ಬಿಡುಗಡೆಯಾದ ಸಾವರ್ಕರ್ ಅವರಿಂದ ಏನು ಕಲಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಎನ್‌ಎಸ್‌ಯುಐ ಮುಖಂಡ ರವಿಕುಮಾರ್ ರಾಯಸಂದ್ರ ಮಾತನಾಡಿ, ಸಾವರ್ಕರ್ ಸ್ವಾತಂತ್ರ್ಯ ಹೊರಾಟದಲ್ಲಿ ಭಾಗವಹಿಸಿದ್ದರು ಎಂಬುದಕ್ಕೆ ಇದುವರೆಗೂ ಯಾವುದೇ ರೀತಿಯ ದಾಖಲೆಗಳನ್ನು ಭಾರತ ಸರ್ಕಾರಕ್ಕೆ ಲಭ್ಯವಾಗಿಲ್ಲ. ಕೋಮುವಾದಿ ಬಿಜೆಪಿ ಸರ್ಕಾರವು ಸ್ವಾತಂತ್ರö್ಯಕ್ಕಾಗಿ ತನ್ನ ಪಕ್ಷದ ಯಾವುದೇ ಸದಸ್ಯರು ಇಲ್ಲದಿರುವುದನ್ನು ಮನಗಂಡು ಜನರ ಮಧ್ಯೆ ಕೋಮುವಾದ ಹುಟ್ಟು ಹಾಕಲು ಇಂತಹ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ತುಮಕೂರು ಜಿಲ್ಲಾ ಪ್ರಗತಿಪರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಮೇಶ್, ಬಿವಿಎಸ್ ಮುಖಂಡ ರಂಗಧಾಮಯ್ಯ, ಭಾನುಪ್ರಕಾಶ್, ಎನ್‌ಎಸ್‌ಯುಐ ಅಮಾನುಲ್ಲಾ, ಎಸ್‌ಎಫ್‌ಐ ನಗರಾಧ್ಯಕ್ಷ ಶಶಿವರ್ಧನ್, ನಗರ ಕಾರ್ಯದರ್ಶಿ ಅಜಿತ್, ಮಂಜು, ವಾಲ್ಮಿಕಿ ಸೇನೆಯ ಕರಿಯ ನಿಶಾದ್, ಭಾರತೀಯ ಶರಣ ಸೇನೆಯ ಜಿಲ್ಲಾಧ್ಯಕ್ಷ ರಮೇಶ್, ದಲಿತ್ ವಿದ್ಯಾರ್ಥಿ ಸೇನೆ ಅಜಿತ್ ಕುಮಾರ್ ಬೆಳ್ಳಿಬಟ್ಲು, ಭಗತ್ ಸೇನೆ ರವಿಕುಮಾರ್ ಮೊದಲಾದವರು ಭಾಗವಹಿಸಿದ್ದರು.