ಇತಿಹಾಸ ಪ್ರಸಿದ್ದ ಗೂಳೂರು ಕೆರೆ ತುಂಬಿ ಕೋಡಿಬಿದ್ದಿದ್ದು ಕೆರೆಯ ಏರಿಯಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಅಪಾಯದ ಅಂಚು ತಲುಪಿದೆ. ಕೆರೆಯ ತೂಬಿನ ಬಳಿ ರಂಧ್ರ ಬಿದ್ದು ಸ್ವಲ್ಪ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದ್ದು ಕೆರೆಯ ಏರಿ ಒಡೆಯುವ ಮಟ್ಟಕ್ಕೆ ಹೋಗಿದೆ.
ಕಳೆದ ಎರಡು ದಶಕಗಳಿಂದ ನಿರ್ವಹಣೆಯಿಲ್ಲದೆ ಬತ್ತಿಹೋಗಿದ್ದ ಕೆರೆ ಇದೀಗ ಮಳೆ ನೀರಿನಿಂದ ತುಂಬಿ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಕೆರೆಯು ಭರ್ತಿ ಆಗಿರುವುದರಿಂದ ಕೆರೆ ಜೀವ ಕಳೆ ಬಂದಂತಾಗಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಆದರೆ ಕೆರೆಯ ತೂಬಿನ ಬಳಿ ಬೊಂಗೆ ಬಿದ್ದು ನೀರು ಹರಿದು ಹೊರಬರುತ್ತಿರುವುದು ಗೂಳೂರು ಜನರ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಕೆರೆಯ ಏರಿ ಇನ್ನೆರಡು ಅಡಿ ನೀರು ಬಂದರೆ ಏರಿಯ ಮೇಲೆಯೇ ನೀರು ಹರಿದುಹೋಗುವ ಸಾಧ್ಯತೆ ಹೆಚ್ಚಾಗಿದೆ. ಇದು ಕೂಡ ಜನರ ಆತಂಕಕ್ಕೆ ಕಾರಣವಾಗಿದೆ.
ಕೆರೆ ತುಂಬಿದ್ದು ತೂಬಿನ ಬಳಿ ರಂಧ್ರದ ಮೂಲಕ ನೀರು ಹರಿದು ಹೊರಹೋಗುತ್ತಿರುವುದಕ್ಕೆ ಆತಂಕ ಗೂಳೂರು ಜನ ಇಂಜಿನಿಯರ್ ಗಳಿಗೆ ಮಾಹಿತಿ ನೀಡಿದ್ದರೂ ಸ್ಥಳಕ್ಕೆ ಬಂದು ನೋಡಿಕೊಂಡು ಸುಮ್ಮನೆ ಹೋಗಿದ್ದಾರೆ. ಇನ್ನೆರಡು ಅಡಿ ನೀರು ಬಂದರೆ ಕೆರೆಯ ಏರಿಗೆ ಅಪಾಯವಿದೆ ಇದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಂಡರೆ ಅಪಾಯವನ್ನು ತಪ್ಪಿಸಬಹುದು ಎಂದು ಜನತೆ ತಿಳಿಸಿದ್ದಾರೆ.
ಬಹಳ ವರ್ಷಗಳಿಂದ ನಿರ್ವಹಣೆ ಇಲ್ಲದೆ ಕೆರೆ ಅಪಾಯದಲ್ಲಿದ್ದು ಜನರು ಆತಂಕಗೊಳ್ಳಲು ಕಾರಣವಾಗಿದೆ. ಹಾಗಾಗಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳು ಗೂಳೂರು ಕೆರೆಯ ನಿರ್ವಹಣೆಗೆ ಮುಂದಾಗಬೇಕು. ಇಲ್ಲದಿದ್ದರೆ ಸಾವಿರಾರು ಎಕೆರೆಯಲ್ಲಿ ಬೆಳೆದಿರುವ ಬೆಳೆ ನಾಶವಾಗಲಿದೆ ಎಂದು ಹೇಳಿದ್ದಾರೆ.
ಎರಡು ದಶಕಗಳ ನಂತರ ಸಾಕಷ್ಟು ಪ್ರಮಾಣದಲ್ಲಿ ಶೇಖರಣೆಗೊಂಡಿರುವ ನೀರು ವ್ಯರ್ಥವಾಗಿ ಹೋಗುವ ಮೊದಲು ಕೆರೆಯನ್ನು ಪರಿಶೀಲಿಸಿ ಕೆರೆಯ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜನತೆ ಆಗ್ರಹಿಸಿದ್ದಾರೆ.