ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ದೊಡ್ಡ ಮಟ್ಟದ ಪ್ರತಿರೋಧ ಒಡ್ಡಬೇಕಾದ ಅಗತ್ಯವಿದೆ ಎಂದು ಸಾಹಿತಿ ಎಲ್.ಎನ್. ಮುಕುಂದ ರಾಜ್ ಸಲಹೆ ನೀಡಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ವ್ಯಕ್ತವಾಗುತ್ತಿದ್ದರೂ ಮುಖ್ಯಮಂತ್ರಿಗಳು ಮಾತನಾಡುತ್ತಿಲ್ಲ. ಇವರಿಗೆ ಪ್ರಧಾನಿ ಮೋದಿ ಹೈಕಮಾಂಡ್ ಅಲ್ಲ. ಇವರ ಹೈಕಮಾಂಡ್ ನಾಗಪುರದಲ್ಲಿದೆ ಎಂದು ಹೇಳಿದರು.
ತುಮಕೂರು ನಗರದಲ್ಲಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಮತ್ತು ಜನಪರ ಚಳವಳಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪಠ್ಯಪುಸ್ತಕ ಪರಿಷ್ಕರಣೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಸಂವಿಧಾನ ಬಂದು 70 ವರ್ಷಗಳ ನಂತರವೂ ಅನ್ಯಾಯ, ಅವಮಾನ ಮಾಡುತ್ತಿರುವುದನ್ನು ಶೂದ್ರರು, ದಲಿತರು ಬರಹದ ಮೂಲಕ ಎತ್ತಿ ತೋರಿಸಿದಾಗ ನಮಗೆ ಉಳಿಗಾಲವಿಲ್ಲ ಎಂದು ತಿಳಿದು ಈಗ ಪಠ್ಯಪುಸ್ತಕದ ಮೂಲಕ ಆರ್.ಎಸ್.ಎಸ್ ಹೇಳಿದ್ದನ್ನು ಹೇರಲು ಹೊರಟಿದ್ದಾರೆ ಎಂದು ದೂರಿದರು.
ನಾಡಗೀತೆ, ನಾಡಧ್ವಜಕ್ಕೆ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥ ಅವರನ್ನು ರಾಷ್ಟ್ರದ್ರೋಹದಡಿ ಬಂಧಿಸಬೇಕಿತ್ತು. ಆದರೆ ಸರ್ಕಾರ ಹಾಗೆ ಮಾಡಲಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಒಂದೇ ಸಮುದಾಯದವರನ್ನೇ ಶಿಕ್ಷಣ ಸಚಿವರನ್ನಾಗಿ ಮಾಡಿದೆ. ಒಂದು ಸಮಾಜದಲ್ಲಿ ಮಾತ್ರವೇ ವಿದ್ವಾಂಸರು ಇರುವುದು. ಅಲೆಮಾರಿ, ಮಹಿಳೆಯರು, ದಲಿತರು ಬರವಣಿಗೆ ಮಾಡುತ್ತಿದ್ದಾರೆ. ಎಲ್ಲಾ ಜಾತಿಯವರು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಇರಬೇಕಿತ್ತು. ಆದರೆ ಹಾಗೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಕ್ರವರ್ತಿ ಸೂಲಿಬೆಲೆ ಅವರ ಪಾಠ ಇಟ್ಟಿದ್ದಾರೆ. ಮಕ್ಕಳು ಅವರ ಕಾವ್ಯ ನಾಮವೇನು ಎಂದರೆ ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಹೆಂಗ್ ಪುಂಗ್ಲಿ ಅವರ ಕಾವ್ಯನಾಮ ಎಂದು ಹೇಳಬೇಕೇ ಎಂದು ಪ್ರಶ್ನಿಸಿದರು.


