ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುರಿತು ಮಾಜಿ ಶಾಸಕ ಕೆ.ಎನ್.ರಾಜಣ್ಣ ನೀಡಿರುವ ಲಘು ಹೇಳಿಕೆಯನ್ನು ಖಂಡಿಸಿ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಸಮಾವೇಶಗೊಂಡ ಜೆಡಿಎಸ್ ಕಾರ್ಯಕರ್ತರು ರಾಜಣ್ಣ ವಿರುದ್ಧ ಘೋಷಣೆಗಳನ್ನು ಕೂಗಿದರು.
ದೇವೇಗೌಡರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವ ಕೆ.ಎನ್.ರಾಜಣ್ಣ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಹುಚ್ಚಿಮಾಸ್ತಿಗೌಡ ವೃತ್ತದಲ್ಲಿ ಕೆ.ಎನ್.ರಾಜಣ್ಣ ಅವರ ಅಣಕು ಶವ ಯಾತ್ರೆ ನಡೆಸಿದ ಕಾರ್ಯಕರ್ತರು ರಾಜಣ್ಣ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಡಿ.ನಾಗರಾಜಯ್ಯ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಕೆ.ಎನ್. ರಾಜಣ್ಣ ನಾಲಗೆ ಹರಿಯಬಿಟ್ಟು ಮಾತನಾಡಿದ್ದಾರೆ. ಇದು ಖಂಡನೀಯ. ರಾಜಣ್ಣ ಬಾಯಿಗೆ ಬಂದಂತೆ ಮಾತನಾಡಿದ್ದು ದೇವೇಗೌಡರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ರಾಜಣ್ಣ ಮಾತನಾಡುವ ಮೊದಲು ದೇವೇಗೌಡರ ಹಿರಿತನದ ಬಗ್ಗೆ ಯೋಚಿಸಬೇಕಿತ್ತು. ಹಳ್ಳಿಗಾಡಿನಿಂದ ಬಂದ ದೇವೇಗೌಡರು ಸಂಸದರಾಗಿ, ಪ್ರಧಾನಿಯಾಗಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರ ಅಧಿಕಾರ ಅವಧಿಯಲ್ಲಿ ಎಲ್ಲ ಸಮುದಾಯದ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಕಣ್ಣೀರು ಒರೆಸುವಂತಹ ಹೇಳಿಕೆ ನೀಡಿದ ರಾಜಣ್ಣ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜಣ್ಣ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಡಿ.ನಾಗರಾಜಯ್ಯ ಒತ್ತಾಯಿಸಿದರು.