ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿವಸೇನೆಯ ನಾಯಕನಿಗೆ 2.5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಲು ಒಪ್ಪಿಗೆ ನೀಡಿದ್ದರೆ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯಾಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಸೇನಾ ನಾಯಕನನ್ನು ಸಿಎಂ ಮಾಡುವ ಮೂಲ ಒಪ್ಪಂದಕ್ಕೆ ಅಂಟಿಕೊಂಡಿದ್ದರೆ ಎನ್.ಸಿ.ಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸುವ ಗೋಜಿಗೆ ಹೋಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮಿತ್ ಶಾ ಅವರೊಂದಿಗೆ ನಡೆದ ಒಪ್ಪಂದಂತೆ ಆಗಿದ್ದರೆ ಇಂದು ಬಿಜೆಪಿ ನಾಯಕರೊಬ್ಬರು ಮುಖ್ಯಮಂತ್ರಿಯಾಗಿರುತ್ತಿದ್ದರು. ನಾನು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಶಿವಸೇನೆ ಸಿಎಂ ಆಗಿರಬೇಕು ಎಂದು ಹೇಳಿದ್ದೆ. ಅವರು ಇದನ್ನು ಮೊದಲೇ ಮಾಡಿದ್ದರೆ ಮಹಾ ವಿಕಾಸ್ ಆಘಾಡಿ ಇರುತ್ತಿರಲಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನ ಜುಲೈ 3 ರಿಂದ ಆರಂಭವಾಗುವ ಮೊದಲೇ ಉದ್ದವ್ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ.
ಜುಲೈ 3ರಂದು ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಜುಲೈ 2ರಂದು ಮಧ್ಯಾಹ್ನ 12 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು ಎಂದು ರಾಜ್ಯ ಶಾಸಕಾಂಗ ಕಾರ್ಯದರ್ಶಿ ವಿಧಾನಸಭೆಯ ಸದಸ್ಯರಿಗೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಕ್ಷದ ನಾಯಕರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆ ಸಲ್ಲಿಸಿರುವ ಅರ್ಜಿಯನ್ನು ಒಳಗೊಂಡಂತೆ ಸುಪ್ರೀಂಕೋರ್ಟ್ ಜುಲೈ 11ರಂದು ವಿಚಾರಣೆಗೆ ಸಿದ್ದವಾಗಿದೆ.
ಶಿವಸೇನೆಯ ಮುಖ್ಯ ಸಚೇತಕ ಸುನಿಲ್ ಪ್ರಭು ಶುಕ್ರವಾರ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ್ದು ಅನರ್ಹಗೊಳಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಅವರನ್ನು ಸದನದಿಂದ ಅಮಾನತುಗೊಳಿಸುವಂತೆ ಕೋರಿದ್ದಾರೆ. ವಿಧಾನಸಭೆ ಪ್ರವೇಶಿಸದಂತೆ ಆದೇಶ ನೀಡುವಂತೆಯೂ ಪ್ರಭು ಕೋರಿದ್ದಾರೆ.