ತುಮಕೂರು ಗೆದ್ದರೆ ರಾಜ್ಯ ಗೆದ್ದಂತೆ ಎಂಬ ನಂಬಿಕೆ ಇದೆ. ಇಲ್ಲಿ ಹೆಚ್ಚು ಸ್ಥಾನ ಗೆದ್ದರೆ ರಾಜ್ಯದಲ್ಲೂ ಗೆಲ್ಲುತ್ತೇವೆ. ರಾಜಕಾರಣದಲ್ಲಿ ಸಾಧ್ಯವಾಗದಿರುವುದು ಏನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ತುಮಕೂರಿನಲ್ಲಿ ನಡೆದ ನವಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಈ ರಾಜ್ಯದಲ್ಲಿ ಜನ ಎಲ್ಲರ ಆಡಳಿತವನ್ನು ನೋಡಿದ್ದಾರೆ. ಬಿಜೆಪಿ, ದಳ ಮತ್ತು ಕಾಂಗ್ರೆಸ್ ಆಡಳಿತ ನೋಡಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ಮಾಡಿದೆ ಎಂದು ತಿಳಿಸಿದರು.
ರಾಜ್ಯಮಟ್ಟದಲ್ಲಿ ನಾವು ದೊಡ್ಡ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಇಲ್ಲಿ ನೀವು ಪಕ್ಷದ ಸಂಘಟನೆ, ಹಳ್ಳಿ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವ ಬಗ್ಗೆ ಚರ್ಚೆ ಮಾಡಬೇಕು. ನಾವೆಲ್ಲರೂ ಇಲ್ಲಿ ಕಾರ್ಯಕರ್ತರಾಗಬೇಕು. ನಂತರ ನಾಯಕರಾಗಬೇಕು. ನಾವು ನಮ್ಮ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಮುನ್ನಡೆ ತಂದುಕೊಡದಿದ್ದರೆ ನಾಯಕರಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಪಕ್ಷದ ಬೂತ್ ಸಮಿತಿ ಮಾಡಿ ಪಂಚಾಯ್ತಿ ಕಚೇರಿಯಲ್ಲಿ ಕೂತು ಸಮಿತಿ ಮಾಡಬೇಕೇ ಹೊರತು, ಶಾಸಕರು ನಾಯಕರ ಮನೆಯಲ್ಲಿ ಸಮಿತಿ ಮಾಡುವುದಾದರೆ ನಮಗೆ ಸಮಿತಿಯೇ ಬೇಡ. ಗ್ರಾಮೀಣ ಪ್ರದೇಶದಲ್ಲಿ ಮತ ಸೆಳೆಯಲು ಸಜ್ಜಾಗಿ. ಆಗ ಮಾತ್ರ ಚುನಾವಣೆಯಲ್ಲಿ ಮುನ್ನಡೆ ಪಡೆಯಲು ಸಾಧ್ಯ ಎಂದರು.
ಚುನಾಔಣಾ ಆಯೋಗದ ಮತದಾರರ ಪಟ್ಟಿ ಇಟ್ಟುಕೊಂಡು ಸದಸ್ಯತ್ವದ ಪಟ್ಟಿ ಇಟ್ಟುಕೊಂಡು ಯುವಕರು, ಮಹಿಳೆಯರು ಹಾಗು ರೈತರ ಸಭೆ ಮಾಡಿ ಅವರನ್ನು ಸಭೆಗೆ ಆಹ್ವಾನಿಸಿ ಈ ಅಂಕಿ ಅಂಶಗಳೇ ಪಕ್ಷದ ಆಸ್ತಿ ಎಂದು ಹೇಳಿದರು.
ಯುವಕರು ಹಾಗೂ ಮಹಿಳೆಯರ ಬಗ್ಗೆ ನಾವು ಹೆಚ್ಚಿನ ಆಲೋಚನೆ ಮಾಡಬೇಕು. ನಾವು ಯುವಕರ ಬಗ್ಗೆ ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದು, ಪಂಚಾಯ್ತಿ ಮಟ್ಟದಲ್ಲಿ ತಂಡ ಮಾಡಿ ನಿರುದ್ಯೋಗಿಗಳಿಗೆ ಅರ್ಜಿ ನೀಡಿ ಕೆಲಸ ಇಲ್ಲದೆ ಮನೆಯಲ್ಲಿರುವವ ಪಟ್ಟಿ ಮಾಡಿ ಅವರ ಸಮ್ಮೇಳನ ಮಾಡಿ ಎಂದು ಸಲಹೆ ನೀಡಿದ್ದಾರೆ.