ಬೆಂಗಳೂರಿನ ಗಾಂಧೀ ಭವನದಲ್ಲಿ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್ ಮತ್ತು ಸಂಗಾತಿಗಳ ಮೇಲೆ ಬಿಜೆಪಿಯ ಗೂಂಡಾ ಪಡೆ ನಡೆಸಿರುವ ದಾಳಿಯ ಕೃತ್ಯವನ್ನು ಸಂಯುಕ್ತ ಹೋರಾಟ ಕರ್ನಾಟಕ ತೀವ್ರವಾಗಿ ಖಂಡಿಸಿದೆ.
ಗೂಂಡಾ ದಾಳಿಯನ್ನು ಖಂಡಿಸಿ ಮಂಗಳವಾರದಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿದೆ ಎಂದು ಸಂಯುಕ್ತ ಹೋರಾಟದ ಸಂಯೋಜಕರಾದ ಬಯ್ಯಾರೆಡ್ಡಿ ಮತ್ತು ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಮಂಗಳವಾರ 11 ಗಂಟೆಗೆ ಬೆಂಗಳೂರಿನ ಪ್ರತಿಭಟನೆಯು ಪ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ. ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲಾ ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ ಯುವಜನ ಸಂಘಟನೆಗಳು ಸೇರಿ ಎಲ್ಲಾ ಸಹಭಾಗಿ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಇದು ಕೇವಲ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಬಳೆದಿರುವುದಲ್ಲ. ದೇಶದ ರೈತ ಹೋರಾಟದ ಮೇಲೆಯೇ ಮಸಿ ಬಳಿಯುವ ಷಡ್ಯಂತ್ರವನ್ನು ಬಿಜೆಪಿ ಹೆಣೆಯುತ್ತಿರುವುದು ನಿಶ್ಛಳವಾಗಿ ಗೋಚರಿಸುತ್ತಿದೆ. ಈ ಷಡ್ಯಂತ್ರವನ್ನು ಸಂಯುಕ್ತ ಹೋರಾಟ-ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಕ್ಷಮಾಪಣೆ ಕೇಳಿ ಇಂತಹ ಷಡ್ಯಂತ್ರವನ್ನು ನಿಲ್ಲಿಸಬೇಕೆಂದು ಆಗ್ರಹಿಸುತ್ತೇವೆ ಎಂದಿದ್ದಾರೆ.
ಕೋಡಿಹಳ್ಳಿ ವಿರುದ್ಧದ ಆರೋಪ ವಿಚಾರಣೆಗೆ ಸಮಿತಿ ರಚನೆ:
ಇದೇ ದಿನ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಬಂದಿರುವ ಆರೋಪದ ಕುರಿತು ಸಂಯುಕ್ತ ಹೋರಾಟ ಕರ್ನಾಟಕ ಕೋರ್ ಕಮಿಟಿ ಸಭೆ ನಡೆಯಲಿದೆ. ಆರೋಪವು ಬಹಳ ಗಂಭೀರವಾಗಿದ್ದು, ಇದನ್ನು ಸ್ವತಂತ್ರ ಮತ್ತು ಸಮಗ್ರವಾಗಿ ತನಿಖೆ ನಡೆಸಿ ಒಂದು ತೀರ್ಮಾನಕ್ಕೆ ಬರುವುದಾಗಿ ಸಮಿತಿ ನಿರ್ಣಯಿಸಿದೆ.
ಇದರ ಭಾಗವಾಗಿ ತ್ರಿಸದಸ್ಯ ಪೀಠವನ್ನು ಸಮಿತಿ ರಚಿಸಿದೆ. ದೆಹಲಿಯ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕತ್ವದೊಂದಿಗೂ ಇದರ ಕುರಿತು ಎಲ್ಲಾ ದೃಷ್ಟಿಕೋನದಿಂದಲೂ ಚರ್ಚಿಸಿ ಸಮನ್ವಯ ಮಾಡಿಕೊಂಡು ಸಮಗ್ರವಾದ ತೀರ್ಮಾನದ ಜೊತೆಗೆ ಸಂಪೂರ್ಣವಾದ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.


