Monday, December 23, 2024
Google search engine
Homeಮುಖಪುಟಪಿಎಸ್ಐ ನೇಮಕಾತಿ ಹಗರಣ - ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ತನಿಖೆಗೆ ಸಿದ್ದು ಆಗ್ರಹ

ಪಿಎಸ್ಐ ನೇಮಕಾತಿ ಹಗರಣ – ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ತನಿಖೆಗೆ ಸಿದ್ದು ಆಗ್ರಹ

ಪಿಎಸ್ಐ ನೇಮಕ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ, ಹಗರಣದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಯಿದ್ದರೂ ಸಹ ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಯಾವ ಮಂತ್ರಿಗಳ ಮೇಲೆ ಆರೋಪವಿದೆಯೋ ಕೂಡಲೆ ಅವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಿ, ತನಿಖೆ ನಿಷ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ಒಳಗೊಳಗೆ ಭಯವಿದ್ದ ಕಾರಣಕ್ಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿಲ್ಲ. ಪ್ರಬಲ ತಿಮಿಂಗಿಲಗಳನ್ನು ಹಿಡಿದು ತನಿಖೆ ನಡೆಸುವ ಶಕ್ತಿ ಸಿಐಡಿಗೆ ಇಲ್ಲ ಎಂದು ನಾವು ಹೇಳಿದೆವು. ಈ ತನಿಖಾ ಸಂಸ್ಥೆಯು ನಾವು ಹೇಳಿದಂತೆಯೇ ನಡೆದುಕೊಳ್ಳುತ್ತಿದೆ. ಇಷ್ಟು ದಿನವಾದರೂ ಸಹ ಒಬ್ಬನೆ ಒಬ್ಬ ಪ್ರಭಾವಿಯನ್ನು ತನಿಖೆಗೆ ಒಳಪಡಿಸಿಲ್ಲ. ಇದನ್ನು ನೋಡಿದರೆ ಇಡೀ ಹಗರಣವನ್ನು ನಿಧಾನಕ್ಕೆ ಕತ್ತು ಹಿಸುಕಿ ಮೂಲೆಗೆ ಎಸೆಯುವ ಹುನ್ನಾರ ಕಾಣಿಸುತ್ತಿದೆ ಎಂದು ಆರೋಪಿಸಿದರು.

ಒಬ್ಬೊಬ್ಬ ಪಿಎಸ್‍ಐ ನೇಮಕಕ್ಕೆ 30 ಲಕ್ಷದಿಂದ ಒಂದೂವರೆ ಕೋಟಿ ರೂಪಾಯಿವರೆಗೂ ಹಣ ಪಡೆಯಲಾಗಿದೆ ಎನ್ನುವ ಸಂಗತಿ ಸಿಐಡಿ ತನಿಖೆಯಿಂದ ಹೊರಗೆ ಬಂತು. ನೇಮಕಾತಿಗಾಗಿ ಹಣ ಕೊಟ್ಟ, ಹಣಕ್ಕಾಗಿ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದ ಸಣ್ಣ ಪುಟ್ಟ ಕೆಲವರನ್ನು ಬಂಧಿಸಿದಿರಿ. ಆದರೆ ನೂರಾರು ಕೋಟಿ ಹಣ ಯಾರ ಕೈ ಸೇರಿತು ಎನ್ನುವುದನ್ನು ಬಹಿರಂಗಗೊಳಿಸಲೇ ಇಲ್ಲ. ಹಣ ಪಡೆದ ದೊಡ್ಡ ತಲೆಗಳನ್ನು ಈ ಕ್ಷಣಕ್ಕೂ ಬಂಧಿಸಿಲ್ಲ. ಅವರನ್ನು ತನಿಖೆಗೆ ಒಳಪಡಿಸಿಲ್ಲ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರ ಹಗರಣದಲ್ಲಿ ನೇರ ಭಾಗಿ ಆಗಿದ್ದಾರೆ ಎಂಬ ಆರೋಪವಿದೆ. ಆದರೆ ಸಿಐಡಿ ಮಾತ್ರ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ಸಿಐಡಿಯು ಇದುವರೆಗೆ ಅವರುಗಳಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಿಲ್ಲ. ಆದರೆ ಹಗರಣಗಳನ್ನು ಬೆಳಕಿಗೆ ತರಲು ಪ್ರಯತ್ನಿಸಿದ ನಮ್ಮ ಪಕ್ಷದ ಶಾಸಕರಿಗೆ ಮಾತ್ರ ಮೇಲಿಂದ ಮೇಲೆ ನೋಟಿಸ್ ನೀಡಿದ್ದೀರಿ. ಇದುವರೆಗೂ ಸಹ ವಿಧಾನಸೌಧ ಮುಂತಾದ ಕಡೆ ಕೂತಿರುವ ಹಗರಣದ ರೂವಾರಿಗಳನ್ನು ಮುಟ್ಟುವ ಕೆಲಸ ಮಾಡಿಲ್ಲ. ಏನಿದರ ಅರ್ಥ? ಯಾರನ್ನು ರಕ್ಷಿಸಲು ಈ ತನಿಖೆ ನಡೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸರ್ಕಾರ ನೆಪಕ್ಕೆ ಮಾತ್ರ ಜನರ ಕಣ್ಣೊರೆಸಲು ಸಿಐಡಿ ತನಿಖೆ ನಡೆಸುತ್ತಿರುವಂತಿದೆ. ಒಂದೊಂದು ಹುದ್ದೆಗೂ ಪಡೆದ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಯಾರ ಕೈ ಸೇರಿದೆ? ಸರ್ಕಾರದ ದೊಡ್ಡ ತಲೆಗಳ ಸೂಚನೆ ಇಲ್ಲದೆ ಕೇವಲ ಕೆಳ ಹಂತದ ಅಧಿಕಾರಿಗಳು ನೂರಾರು ಕೋಟಿ ಹಣವನ್ನು ಸುಲಿಗೆ ಮಾಡಲು ಸಾಧ್ಯವೇ? ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳನ್ನು ಪುರಸ್ಕಾರದ ರೀತಿಯಲ್ಲಿ ವರ್ಗಾವಣೆ ಮಾಡಿದ್ದು ಬಿಟ್ಟರೆ ಯಾರನ್ನೂ ಬಂಧಿಸಿಲ್ಲ. ಅವರು ಪಡೆದ ಹಣವನ್ನೂ ವಶಪಡಿಸಿಕೊಂಡಿಲ್ಲ. ಹೀಗಾಗಿ ದೊಡ್ಡ ತಲೆಗಳನ್ನು ರಕ್ಷಿಸಲಿಕ್ಕೆಂದೇ ಸಿಐಡಿ ತನಿಖೆ ನಡೆಸಿರುವುದು ಖಚಿತವಾಗುತ್ತಿದೆ ಎಂದು ಹೇಳಿದರು.

ತನಿಖೆ ನಿರ್ಭೀತವಾಗಿ, ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ರೀತಿಯ ತನಿಖೆಯಿಂದ ಕಳ್ಳರನ್ನು ಹುಡುಕಿ ಶಿಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular