Monday, September 16, 2024
Google search engine
Homeಜಿಲ್ಲೆಗುಬ್ಬಿಯ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣ - ನಿಷ್ಪಕ್ಷಪಾತ ತನಿಖೆ ಆಗ್ರಹಿಸಿ ಕಾಲ್ನಡಿಗೆ ಜಾಥಾ

ಗುಬ್ಬಿಯ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣ – ನಿಷ್ಪಕ್ಷಪಾತ ತನಿಖೆ ಆಗ್ರಹಿಸಿ ಕಾಲ್ನಡಿಗೆ ಜಾಥಾ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪೆದ್ದನಹಳ್ಳಿಯಲ್ಲಿ ಅಮಾನವೀಯವಾಗಿ ನಡೆದ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಡೆಸಬೇಕೆಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಗುಬ್ಬಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

ದಲಿತ ಯುವಕರ ಹತ್ಯೆ ಪ್ರಕರಣವನ್ನು ಪೊಲೀಸರು ಯಾರದೇ ಪ್ರಭಾವಕ್ಕೂ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇದೊಂದು ಅಮಾನವೀಯ ಘಟನೆ. ಇಂತಹ ಪ್ರಕರಣಗಳು ಮುಂದೆ ನಡೆಯದಂತೆ ಕ್ರಮವಹಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಕಾಲ್ನಡಿಗೆ ಜಾಥಾವನ್ನು ಉದ್ದೇಶಿಸಿ ಜನಪರ ಚಿಂತಕ ಕೆ.ದೊರೈರಾಜು ಮಾತನಾಡಿದರು. ಪೆದ್ದನಹಳ್ಳಿಯಲ್ಲಿ ನಡೆದ ಮಾನವ ಹತ್ಯೆಯ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು. ಇದುವರೆಗೂ ನಡೆದ ದಲಿತರ ಹತ್ಯೆ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ಹತ್ಯೆ ನಡೆಸಿದವರಿಗೆ ಶಿಕ್ಷೆ ಆಗಿಲ್ಲ. ಕಾರಣ ಪೊಲೀಸರು ಸಮಗ್ರ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸರಿಯಾದ ದಿಕ್ಕಿನಲ್ಲಿ ತನಿಖೆಯಾಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಗುಂಪು ಕಟ್ಟಿಕೊಂಡು ಮಾನವ ಹತ್ಯೆ ಮಾಡುವುದು ತಪ್ಪು. ಇಂತಹ ಘಟನೆಗಳು ಮರುಕಳಿಸುವಂತೆ ಬಿಟ್ಟರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸದಂತೆ ಆಗುತ್ತದೆ. ಬಲಿಷ್ಠ ಜಾತಿಗಳು ಕಾನೂನು ಕೈಗೆತ್ತಿಕೊಂಡು ತಳಸ್ತರದ ಜನರ ಮೇಲೆ ದೌರ್ಜನ್ಯ ಎಸಗಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಇದು ರಕ್ಷಣಾ ಇಲಾಖೆ ಇದೆಯೋ ಇಲ್ಲವೋ ಎಂಬಂತೆ ಆಗುತ್ತದೆ ಎಂದರು.

ಸಾಮಾಜಿಕ ಕಾರ್ಯಕರ್ತ ಹಾಗೂ ದಲಿತಪರ ಹೋರಾಟಗಾರ ಕೊಟ್ಟ ಶಂಕರ್ ಮಾತನಾಡಿ, ಪೆದ್ದನಹಳ್ಳಿ ದಲಿತ ಯುವಕರ ಜೋಡಿ ಕೊಲೆಯ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರು ದಲಿತರೆಂಬ ಕಾರಣಕ್ಕೆ ಸರ್ಕಾರದ ಯಾವೊಬ್ಬ ಸಚಿವರು, ಶಾಸಕರು ಪೆದ್ದನಹಳ್ಳಿಗೆ ಭೇಟಿ ನೀಡಿಲ್ಲ. ಇದು ದಲಿತರ ಬಗೆಗಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಸಂಘಪರಿವಾರಕ್ಕೆ ಸೇರಿದ ಹರ್ಷನ ಸಾವಿನ ಸಂದರ್ಭದಲ್ಲಿ ಬಿಜೆಪಿ ಸಚಿವರು ಮತ್ತು ಪಕ್ಷದ ಮುಖಂಡರು ಹರ್ಷನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಹರ್ಷನಿಗೆ ಸಿಕ್ಕ ಗೌರವ ಹತ್ಯೆಯಾದ ದಲಿತ ಯುವಕರಿಗೂ ಸಿಗಬೇಕು. ಆದರೆ ಸರ್ಕಾರ ಬಿಜೆಪಿ ಬೆಂಬಲಿಗರನ್ನು ಒಂದು ರೀತಿ ನಡೆಸಿಕೊಳ್ಳುತ್ತದೆ. ದಲಿತರನ್ನು ಮತ್ತೊಂದು ರೀತಿಯಲ್ಲಿ ನಡೆಸಿಕೊಳ್ಳುತ್ತದೆ. ಹತ್ಯೆಯಾದ ದಲಿತ ಯುವಕರ ಮನೆಗೆ ಸೌಜನ್ಯಕ್ಕಾದರೂ ಒಬ್ಬ ಸಚಿವ-ಶಾಸಕರು ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೆಣ್ಣೂರು ಶ್ರೀನಿವಾಸ್, ಸೂಲಿಕುಂಟೆ ರಮೇಶ್ ಮೊದಲಾದವರು ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular