ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಹೊಗಳುವ ಮೂಲಕ 40ರಷ್ಟು ಕಮಿಷನ್ ಸರ್ಕಾರದ ಭ್ರಷ್ಟಾಚಾರವನ್ನು ಅಮಿತ್ ಶಾ ಮತ್ತು ಅರುಣ್ ಸಿಂಗ್ ಅಧಿಕೃತ ಒಪ್ಪಿಗೆಯ ಮುದ್ರೆ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪಿಎಸ್ಐ ಹಗರಣದಲ್ಲಿ ಸರ್ಕಾರ, ಸಚಿವರು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ. ಸುಮಾರು 300 ಕೋಟಿ ರೂಗೂ ಅಧಿಕ ಭ್ರಷ್ಟಾಚಾರ ನಡೆದಿದೆ. ಆದ್ದರಿಂದ ಸಿಐಡಿ ತನಿಖೆಯಲ್ಲಿ ನ್ಯಾಯ ಸಿಗುವುದಿಲ್ಲ. ಹಾಗಾಗಿ ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ನ ಖಾವೂಂಗಾ, ನ ಖಾನೇದೂಂಗ ಎಂದು ಹೇಳಿದ್ದರು. ಆದರೆ ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿ 1,29,000 ಜನ ಅರ್ಜಿ ಹಾಕಿದ್ದಾರೆ. 57 ಸಾವಿರ ಜನರಿಗೆ ಪರೀಕ್ಷೆಗೆ ಅರ್ಹರು ಎಂದು ಪರೀಕ್ಷೆ ಬರೆಯಲು ಕರೆದಿದ್ದರು. ಅದರಲ್ಲಿ 545 ಜನರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರವೇ ಒಪ್ಪಿಕೊಂಡು ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆ ಮಾಡುವುದಾಗಿ ಹೇಳಿದೆ.
ಈ ನೇಮಕಾತಿ ಸಮಿತಿಯ ನೇತೃತ್ವ ವಹಿಸಿದ್ದ ಅಮೃತ್ ಪೌಲ್ ಹಿರಿಯ ಪೊಲೀಸ್ ಅಧಿಕಾರಿಯನ್ನು ಸರ್ಕಾರ ಆಂತರಿಕ ಭದ್ರತಾ ವಿಭಾಘಕ್ಕೆ ವರ್ಗಾವಣೆ ಮಾಡಿದೆ. ಶಾಂತಕುಮಾರ್ ಡಿವೈಎಸ್.ಪಿ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಇದರಿಂದ ಈ ಇಬ್ಬರೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಿಸಿ ಅಮಾನತು ಮಾಡಬೇಕಿತ್ತು ಎಂದು ಕೇಳಿದ್ದಾರೆ.
ದಿವ್ಯಾ ಹಾಗರಗಿ ಆರ್.ಡಿ.ಪಾಟೀಲ್ ಅವರನ್ನು ಕಿಂಗ್ ಪಿನ್ ಎಂದು ಹೇಳಿ ಬಂಧಿಸಿದ್ದಾರೆ. ಈವರೆಗೆ ಸುಮಾರು 29 ಜನ ತಪ್ಪಿತಸ್ಥರ ಬಂಧನವಾಗಿದೆ. ಹಗರಣದಲ್ಲಿ ಭಾಗಿಯಾದ ಈ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಯಾಕೆ ಕೇಸ್ ದಾಖಲಿಸಿಲ್ಲ. ಅಗತ್ಯ ಕಾನೂನು ಕ್ರಮ ಜರುಗಿಸಿಲ್ಲ. ಇಷ್ಟು ದೊಡ್ಡ ಹಗರಣಕ್ಕೆ ಸರ್ಕಾರ ಮತ್ತು ಗೃಹ ಸಚಿವರೇ ಹೊಣೆ ಎಂದು ಆರೋಪಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಹ ಪ್ರಾಧ್ಯಾಪಕ ಹುದ್ದೆ ನೇಮಕದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನಾಗರಾಜ್ ಮತ್ತು ಸೌಮ್ಯ ಎಂಬುವವರನ್ನು ಬಂಧಿಸಲಾಗಿದೆ. ಇದರಲ್ಲಿ ಉನ್ನತ ಶಿಕ್ಷಣ ಸಚಿವರ ಪಾತ್ರ ಏನು? ಪಿಎಸ್ಐ ನೇಮಕಾತಿ ಹಗರಣದಲ್ಲಿ ಅಶ್ವತ್ಥನಾರಾಯಣ ಅವರ ಪಾತ್ರವಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪರೀಕ್ಷೆಯಲ್ಲಿ 5ನೇ ರ್ಯಾಂಕ್ ಮತ್ತು 10ನೇ ರ್ಯಾಂಕ್ ಬಂದಿರುವವರು ಸಚಿವರ ಸಂಬಂಧಿಕರು. ಈ ಇಬ್ಬರನ್ನು ವಿಚಾರಣೆಗೆ ಕರೆದು ಬಿಟ್ಟು ಕಳಿಸಿದ್ದಾರೆ. ಇವರನ್ನು ಬಂಧಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಶ್ವತ್ಥನಾರಾಯಣ ಅವರ ಮೇಲೆ ಭ್ರಷ್ಟಾಚಾರದ ತೂಗುಗತ್ತಿ ನೇತಾಡುತ್ತಿದೆ. ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಇದು ಜನಸಾಮಾನ್ಯರ ಪೀಡಕ ಜನಸಾಮಾನ್ಯರ ಸುಲಿಗೆ ಸರ್ಕಾರ. ನರೇಂದ್ರ ಮೋದಿ ಅವರು ನಾಟಕ ಮಾಡುವುದನ್ನು ಬಿಟ್ಟು ಭ್ರಷ್ಟಾಚಾರದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.


