ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿಯಲ್ಲಿ ನಡೆದಿರುವ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಮತ್ತು ಸಂತ್ರಸ್ಥ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು. ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ನೇತೃತ್ವದ ಸತ್ಯಶೋಧನ ಸಮಿತಿ ಒತ್ತಾಯಿಸಿದೆ.
ಏಪ್ರಿಲ್ 26ರಂದು ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿಗೆ ಭೇಟಿ ನೀಡಿದ ಸಮಿತಿ ಸದಸ್ಯರು ಹತ್ಯೆಯಾದ ಚಲದೊರೆ ಗಿರೀಶ್ ಮತ್ತು ಪೆದ್ದನಹಳ್ಳಿ ಗಿರೀಶ್ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಧೈರ್ಯ ತುಂಬಿ ಸಾಂತ್ವನ ಹೇಳಿದರು. ಸಂತ್ರಸ್ಥ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ತಲಾ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ, ಮಾನವ ಹಕ್ಕುಗಳ ಸಮಿತಿ ಸದಸ್ಯರು, ವಕೀಲರು, ಎಸ್.ಡಿ.ಪಿ.ಐ ಪಕ್ಷದ ವಕೀಲರ ವಿಭಾಗದ ಮುಖಂಡರು ಪೆದ್ದನಹಳ್ಳಿಗೆ ಭೇಟಿ ನೀಡಿ ಹತ್ಯೆಯಾದ ಯುವಕರ ಕುಟುಂಬಗಳ ಸದಸ್ಯರಿಂದ ಮಾಹಿತಿ ಕಲೆ ಹಾಕಿದರು. ನಂತರ ತುಮಕೂರಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ಆರೋಪಿಗಳನ್ನು ಬಂಧಿಸಬೇಕು. ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಮನವಿ ಮಾಡಿದರು.
ಕೊಲೆ ಪ್ರಕರಣದಡಿ ಈಗಾಗಲೇ 21 ಬಂಧಿಯನ್ನು ಬಂಧಿಸಲಾಗಿದೆ ಎಂದು ಎಸ್.ಪಿ. ನಮಗೆ ತಿಳಿಸಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯಲಿರುವ ಪರಿಹಾರವನ್ನು ಶೀಘ್ರವೇ ಕೊಡಿಸಬೇಕು. ಪಿಟ್ ಗುಂಡಿ ಶುಚಿಗೊಳಿಸುವ ಕೆಲಸದ ಗುರುತಿನ ಪತ್ರವೂ ಇದೆ. ಇದನ್ನು ಜಿಲ್ಲಾಡಳಿತ ಪರಿಗಣಿಸಬೇಕು ಎಂದು ಎಸ್ಪಿ ಅವರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಕೊಟ್ಟ ಶಂಕರ್, ಮರಳೂರು ಕೃಷ್ಣಮೂರ್ತಿ, ಉಪನ್ಯಾಸಕ ಹುಲಿಕುಂಟೆ ಮೂರ್ತಿ, ಗುಬ್ಬಿ ಮಂಜೇಶ್ ಸೇರಿದಂತೆ ಹಲವರು ಹಾಜರಿದ್ದರು.


