ದೆಹಲಿಯಲ್ಲಿ ಆರಂಭವಾದ ಕ್ರಾಂತಿ ಈಗ ಪಂಜಾಬ್ ನಲ್ಲಿ ಆಗಿದೆ. ಶೀಘ್ರವೇ ಇಡೀ ದೇಶ ಕ್ರಾಂತಿಯನ್ನು ನೋಡಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಐತಿಹಾಸಿಕ ಗೆಲವು ಪಡೆಯುತ್ತಿದ್ದಂತೆಯೇ ಮಾತನಾಡಿದ ಕೇಜ್ರಿವಾಲ್, ದೆಹಲಿಯ ಕ್ರಾಂತಿ ಇಡೀ ದೇಶಕ್ಕೆ ಹರಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಎಪಿ ವಿರುದ್ಧ ಎಲ್ಲರೂ ಒಟ್ಟುಗೂಡಿದ್ದರು, ಕೇಜ್ರಿವಾಲ್ ಒಬ್ಬ ಭಯೋತ್ಪಾದಕ ಎಂದರು ಅವರು. ಆದರೆ ದೇಶದ ಜನರು ಮಾತ್ರ ಕೇಜ್ರಿವಾಲ್ ಅವರು ಭಯೋತ್ಪಾದಕರಲ್ಲ, ಅವರು ನಿಜವಾದ ದೇಶಭಕ್ತ ಎಂದು ಹೇಳಿದ್ದಾರೆ ಎಂದು ದೆಹಲಿ ಸಿಎಂ ತಿಳಿಸಿದರು.
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ಪ್ರಮುಖ ಯೋಜನೆಗಳಲ್ಲಿ ಆರೋಗ್ಯ ಮತ್ತು ಶಿಕ್ಷಣದ ‘ದೆಹಲಿ ಮಾದರಿ’ ಒಂದಾಗಿತ್ತು. ಮತದಾರರ ಜನಾದೇಶವನ್ನು ನಮ್ಮ ಪಕ್ಷಕ್ಕೆ ನೀಡಿದ್ದಾರೆ ಎಂದರು.
ಸ್ವಾತಂತ್ರ್ಯ ಪಡೆದ ನಂತರ ನಾವು ವ್ಯವಸ್ಥೆಯನ್ನು ಬದಲಾಯಿಸದಿದ್ದರೆ ಏನೂ ಆಗುವುದಿಲ್ಲ ಎಂದು ಭಗತ್ ಸಿಂಗ್ ಒಮ್ಮೆ ಹೇಳಿದ್ದರು. ಕಳೆದ 75 ವರ್ಷಗಳಲ್ಲಿ ಈ ಪಕ್ಷಗಳು ಮತ್ತು ರಾಜಕಾರಣಿಗಳು ಬ್ರಿಟಿಷರ ವ್ಯವಸ್ಥೆ ಉಳಿಸಿಕೊಂಡಿದ್ದರು. ಅವರು ಯಾವುದೇ ಶಾಲೆಗಳು ಅಥವಾ ಆಸ್ಪತ್ರೆಗಳನ್ನು ಮಾಡಲಿಲ್ಲ. ಕಳೆದ ಏಳು ವರ್ಷಗಳಲ್ಲಿ ಎಎಪಿ ವ್ಯವಸ್ಥೆಯನ್ನು ಬದಲಾಯಿಸಿದೆ ಎಂದರು.
ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡಲು ಶ್ರಮಿಸುವುದಾಗಿ ದೆಹಲಿ ಸಿಎಂ ಹೇಳಿದ್ದಾರೆ. ನಾವೆಲ್ಲರೂ ಹೊಸ ಭಾರತವನ್ನು ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕಾಗಿದೆ, ಅಲ್ಲಿ ದ್ವೇಷಕ್ಕೆ ಸ್ಥಳವಿಲ್ಲ, ಅಲ್ಲಿ ನಮ್ಮ ಸಹೋದರಿಯರು ಮತ್ತು ತಾಯಂದಿರು ಸುರಕ್ಷಿತವಾಗಿರುತ್ತಾರೆ, ಅಲ್ಲಿ ಶ್ರೀಮಂತರು ಮತ್ತು ಬಡವರು ಉತ್ತಮ ಶಿಕ್ಷಣವನ್ನು ಪಡೆಯುತ್ತಾರೆ ಎಂದು ವಿವರಿಸಿದರು.