ಕೊವಿಡ್ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾದ ಪ್ರಮಾಣವನ್ನು ಗಮನಿಸಿ ಫೆಬ್ರವರಿ 5 ರಿಂದ ಜಿಮ್, ಯೋಗ ಕೇಂದ್ರ, ಸಿನಿಮಾ ಹಾಲ್ ಮತ್ತು ಈಜುಕೊಳಗಳಿಗೆ ಪೂರ್ಣ ಆಸನ ಸಾಮರ್ಥ್ಯವನ್ನು ಅನುಮತಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯ ನಂತರ ಕೊವಿಡ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ ಎಂದು ಘೋಷಿಸಲಾಗಿದೆ.
ಜನವರಿಯಲ್ಲಿ ಕೊವಿಡ್ ಆಸ್ಪತ್ರೆಗೆ ದಾಖಲಾದ ದರವು ಶೇ.5ರಷ್ಟಿತ್ತು. ಅದು ಈಗ ಶೇ.2ಕ್ಕೆ ಇಳಿದಿದೆ. ಇದುವರೆಗಿನ ನಿರ್ಬಂಧಗಳಿಂದಾಗಿ ವಿವಿಧ ವಲಯಗಳಿಂದ ನಷ್ಟ ಉಂಟಾಗಿದೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಆಸನ ಸಾಮರ್ಥ್ಯದ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ಸಿನಿಮಾ ಹಾಲ್ ಒಳಗೆ ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿರಬೇಕು. ಇದನ್ನು ಸಿಬ್ಬಂದಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಭಾಂಗಣದ ಒಳಗೆ ಆಹಾರವನ್ನು ಮಾರಾಟ ಮಾಡಲು ಅನುಮತಿ ನೀಡಿಲ್ಲ. ಮಧ್ಯಂತರದಲ್ಲಿ ಅವಕಾಶ ಇದ್ದರೆ ಸಭಾಂಗಣದ ಹೊರಗೆ ತಿನ್ನಬಹುದು ಎಂದು ತಿಳಿಸಿದರು.
ಜೊತೆಗೆ ಈ ಸ್ಥಳಗಳಿಗೆ ಪ್ರವೇಶಿಸುವ ಎಲ್ಲರಿಗೂ ಎರಡು ಡೋಸ್ ಲಸಿಕೆ ನೀಡಿರಬೇಕು. ಪಾಸಿಟಿವಿಟಿ ದರವು ಕಡಿಮೆಯಾಗುತ್ತಿದೆ. ಮೂರನೇ ಅಲೆಯ ಪ್ರಕರಣಗಳು ಉಲ್ಬಣವಾಗುತ್ತಿರುವ ನಡುವೆಯೇ ಶೀಘ್ರವೇ ಗುಣಮುಖರಾಗಿ ಬರುತ್ತಿದ್ದಾರೆ ಎಂದು ಹೇಳಿದರು.


