ಕಡುಬಡತನ ಮತ್ತು ಪತ್ನಿಯ ವೈದ್ಯಕೀಯ ವೆಚ್ಚಕ್ಕಾಗಿ 5 ತಿಂಗಳ ಮಗುವನ್ನು ಕೇವಲ 5 ಸಾವಿರ ರೂಗೆ ಮಾರಾಟ ಮಾಡಿರುವ ಪ್ರಕರಣ ಜಾರ್ಖಂಡ್ ರಾಜ್ಯದಲ್ಲಿ ನಡೆದಿದೆ.
ಚಿಂದಿ ಆಯುವ ಬಜರಂಗ ನಾಯಕ್, ಕ್ಷಯ ರೋಗದಿಂದ ಬಳಲುತ್ತಿರುವ ತನ್ನ ಹೆಂಡತಿ ಗುಡಿಯಾ ದೇವಿಯ ವೈದ್ಯಕೀಯ ವೆಚ್ಚ ಭರಿಸಲು ಮಗುವನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ದಂಪತಿಗಳು ತಮ್ಮ ಮೂರು ವರ್ಷದ ಮಗಳು ದೀಪಾಲಿ ಕುಮಾರಿಯನ್ನೂ ಮಾರಾಟ ಮಾಡಲು ಯೋಜಿಸಿದ್ದರು. ಅದನ್ನು ಗ್ರಾಮಸ್ಥರು ತಡೆದು ಸ್ಥಳೀಯ ಆಡಳಿತಕ್ಕೆ ತಿಳಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದೆ.
ಬಜರಂಗ್ ಮತ್ತು ಗುಡಿಯಾ ದೇವಿಗೆ ನಾಲ್ವರು ಮಕ್ಕಳಿದ್ದಾರೆ. ಅವರಲ್ಲಿ ಆಕಾಶ್ ಕುಮಾರ್ (9), ಖುಷಿ ಕುಮಾರಿ (13) ಹಿರಿಯ ಮಕ್ಕಳಾಗಿದ್ದಾರೆ. ದಂಪತಿ ಬಿಹಾರದ ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಮಗೆ ನಾಲ್ಕು ಮಕ್ಕಳಿದ್ದಾರೆ. ಅವರಲ್ಲಿ ಇಬ್ಬರು ಪಾಟ್ನಾ ಬಳಿಯ ಬಿಹ್ತಾ ಎಂಬಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಂಡತಿ ಚಿಕಿತ್ಸೆಗಾಗಿ ನಮ್ಮ ಚಿಕ್ಕಮಗುವನ್ನು ಮಾರಾಟ ಮಾಡಬೇಕಾಯಿತು ಎಂದು ಬಜರಂಗ್ ಹೇಳಿದ್ದಾರೆ.
ಸ್ಥಳೀಯರು ಮಾಹಿತಿ ನೀಡಿದ ನಂತರ ಆಡಳಿತವು ಶಿಶುವನ್ನು ಮರಳಿ ತರಲು ಸಾಮಾಜಿಕ ಕಾರ್ಯಕರ್ತರಿಗೆ ಸೂಚಿಸಿದೆ. ಮಗುವನ್ನು ಮಾರಾಟ ಮಾಡಿದ ದಂಪತಿಯನ್ನು ಭೇಟಿ ಮಾಡಿ ಅವರನ್ನು ಮರಳಿ ತರುವಂತೆ ನಗರ ವ್ಯವಸ್ಥಾಪಕ ಮತ್ತು ವಾರ್ಡು ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಸರಬರಾಜು ಅಧಿಕಾರಿ ಗುಲಾಮ್ ಸಮ್ದಾನಿ ಹೇಳಿದ್ದಾರೆ.