Saturday, July 27, 2024
Google search engine
Homeಮುಖಪುಟಸಚಿವ ಮಾಧುಸ್ವಾಮಿಗೆ ಜಿಲ್ಲಾ ಉಸ್ತುವಾರಿ ತಪ್ಪಲು ಕಾರಣ ಏನು?

ಸಚಿವ ಮಾಧುಸ್ವಾಮಿಗೆ ಜಿಲ್ಲಾ ಉಸ್ತುವಾರಿ ತಪ್ಪಲು ಕಾರಣ ಏನು?

ಶಿರಾ ಉಪಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿ ಪರ ಸಚಿವ ಜೆ.ಸಿ.ಮಾಧುಸ್ವಾಮಿ ಮತಯಾಚನೆ ಮಾಡಲಿಲ್ಲ. ಪಕ್ಷದ ಚಟುವಟಿಕೆಗಳಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳದೇ ಇರುವ ಮಾಧುಸ್ವಾಮಿ ತನ್ನ ಕ್ಷೇತ್ರಕ್ಕೆ ನೂರು ಕೋಟಿ ರೂಪಾಯಿ ಮಂಜೂರಾತಿ ಮಾಡಿಸಿಕೊಂಡಿದ್ದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಅವರ ವಿಡಿಯೋ ವೈರಲ್ ನಿಂದ ಸಾಬೀತಾಗಿತ್ತು.

ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಜಿಲ್ಲಾ ಉಸ್ತುವಾರಿ, ಕೊವಿಡ್ ಉಸ್ತುವಾರಿ ಕೈತಪ್ಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹಾಕಿ ತುಮಕೂರಿನ ಪ್ರಭಾವಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಉಸ್ತುವಾರಿ ಪಟ್ಟಿಯಿಂದ ಕೈಬಿಡಲು ಕಾರಣವೇನು? ಎಂಬ ಪ್ರಶ್ನೆಗಳು ಕ್ಷೇತ್ರದ ಜನರನ್ನು ಕಾಡತೊಡಗಿವೆ.

ಮಾಧುಸ್ವಾಮಿ ಅವರು ತುಮಕೂರು ಜಿಲ್ಲಾ ಉಸ್ತುವಾರಿಯಾಗಿ ಸಮರ್ಥವಾಗಿ ಕೆಲಸ ಮಾಡಿರಲಿಲ್ಲವೇ? ಉತ್ತಮ ಕೆಲಸ ಮಾಡಿದ್ದರೆ ಜಿಲ್ಲಾ ಉಸ್ತುವಾರಿಯಿಂದ ಕೈಬಿಡುವ ಅಗತ್ಯ ಏನಿತ್ತು? ಎಂಬ ಪ್ರಶ್ನೆಗಳನ್ನು ಜೆಸಿಬಿ ಬೆಂಬಲಿಗರು ಕೇಳತೊಡಗಿದ್ದಾರೆ.

ಈ ಹಿಂದಿನ ಘಟನೆಗಳನ್ನು ಪರಿಗಣಿಸಿ ನೋಡಿದರೆ ಮಾಧುಸ್ವಾಮಿ ಸದಾ ವಿವಾದವನ್ನೇ ಮೈಮೇಲೆ ಎಳೆದುಕೊಂಡು ಬಂದವರು. ಕೋಲಾರದ ರೈತ ಮಹಿಳೆಯ ಕುರಿತು ಅಪಮಾನ ಮಾತುಗಳು, ಚಿಕ್ಕನಾಯಕನಹಳ್ಳಿಯಲ್ಲಿ ಪ್ರಚಾರದ ವೇಳೆ ಯುವಕನೊಬ್ಬನ ಮೇಲಸೆ ಹಲ್ಲೆ ನಡೆಸಿದ್ದು, ಪರಿಸರವಾದಿ ಸಿ.ಯತಿರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಇವೆಲ್ಲವುಗಳನ್ನು ಗಮನಿಸಿ ಜೆ.ಸಿ.ಮಾಧುಸ್ವಾಮಿ ಅವರಿಗೆ ಜಿಲ್ಲಾ ಉಸ್ತುವಾರಿಯಿಂದ ಕೈಬಿಡಲಾಯಿತೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಕಳೆದ ವರ್ಷ ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಂಜಿನಿಯರ್ ಒಬ್ಬರಿಗೆ ಹೆಂಡತಿಯ ಸೀರೆ ಬಗ್ಗೆ ಪ್ರಸ್ತಾಪಿಸಿ ವಿವಾದವನ್ನು ಮೇಲೆ ಎಳೆದುಕೊಂಡಿದ್ದರು. ಸದಾ ವಿವಾದದಿಂದಲೇ ಸುದ್ದಿ ಮಾಡುತ್ತಿರುವ ಜೆ.ಸಿ.ಮಾಧುಸ್ವಾಮಿ ಅವರ ನಡೆಗಳು ಪಕ್ಷಕ್ಕೆ ಮುಜುಗರ ತಂದಿರುವುದನ್ನು ಯಾರೂ ಅಲ್ಲಗೆಳೆದಿಲ್ಲ.

ಶಿರಾ ಉಪಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿ ಪರ ಸಚಿವ ಜೆ.ಸಿ.ಮಾಧುಸ್ವಾಮಿ ಮತಯಾಚನೆ ಮಾಡಲಿಲ್ಲ. ಪಕ್ಷದ ಚಟುವಟಿಕೆಗಳಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳದೇ ಇರುವ ಮಾಧುಸ್ವಾಮಿ ತನ್ನ ಕ್ಷೇತ್ರಕ್ಕೆ ನೂರು ಕೋಟಿ ರೂಪಾಯಿ ಮಂಜೂರಾತಿ ಮಾಡಿಸಿಕೊಂಡಿದ್ದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಅವರ ವಿಡಿಯೋ ವೈರಲ್ ನಿಂದ ಸಾಬೀತಾಗಿತ್ತು.

ಸಚಿವ ಬೈರತಿ ಬಸವರಾಜು ಇತ್ತೀಚೆಗೆ ತುಮಕೂರು ನಗರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಬಂದ ಸಂದರ್ಭದಲ್ಲಿ ಸಂಸದ ಬಸವರಾಜು ಬೈರತಿ ಬಸವರಾಜು ಅವರಿಗೆ ಕಿವಿಯಲ್ಲಿ ಹೇಳಿದ ಮಾತುಗಳುಳ್ಳ ವಿಡಿಯೋ ವೈರಲ್ ಆಗಿತ್ತು.

ಆ ವಿಡಿಯೋದಲ್ಲಿ ಸಂಸದ ಬಸವರಾಜು, ಆ ಸಚಿವ ಇದ್ದಾನಲ್ಲ ಅವನು ಒಂದು ರೀತಿಯಲ್ಲಿ ಕೋರಿಯಾದ ಜಿನ್ ಪಿಂಗ್ ಇದ್ದ ಹಾಗೆ. ಅವನು ಇದೇ ಧೋರಣೆ ಅನುಸರಿಸಿದರೆ ತುಮಕೂರು ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಗೆ ತೊಂದರೆಯಾಗುತ್ತದೆ. ಅವನು 100 ಕೋಟಿ ರೂಪಾಯಿ ಘೋಷಣೆ ಮಾಡಿಕೊಂಡು ಬಂದಿದ್ದಾನೆ. ಬಿಜೆಪಿ ಪಕ್ಷವನ್ನು ಸರ್ವನಾಶ ಮಾಡಲು ಸಂಚು ರೂಪಿಸಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು.

ಸಚಿವ ಬೈರತಿ ಬಸವರಾಜು ಸುಮ್ಮನಿರುವಂತೆ ಹೇಳಿದರೂ ಸಂಸದ ಬಸವರಾಜು ಮಾತನಾಡುತ್ತಲೇ ಇದ್ದರು. ಆ ವಿಡಿಯೋವನ್ನು ವೈರಲ್ ಮಾಡಲಾಗಿತ್ತು. ನಗರದ ಎಂಪ್ರೆಸ್ ಕಾಲೇಜಿನ ಸಭಾಂಗಣ ಉದ್ಘಾಟನೆ ವೇಳೆ ವೇದಿಕೆಯ ಮೇಲೆ ಕರೆದರೂ ಮಾತನಾಡದೆ ಸಿಡಿಮಿಡಿ ವ್ಯಕ್ತಪಡಿಸುತ್ತಲೇ ಹೊರಹೋಗಿದ್ದರು.

ಈ ಘಟನೆಗಳು ನಡೆದ ಒಂದು ತಿಂಗಳ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಳೆಯ ಆದೇಶವನ್ನು ರದ್ದುಗೊಳಿಸಿ ಹೊಸದಾಗಿ ಜಿಲ್ಲಾ ಉಸ್ತುವಾರಿ ಮತ್ತು ಕೊವಿಡ್ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಹೊಸ ಆದೇಶ ಹೊರಡಿಸಿದ್ದಾರೆ. ಈ ಪಟ್ಟಿಯಲ್ಲಿ ಮಾಧುಸ್ವಾಮಿ ಅವರ ಹೆಸರಲಿಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದುವರೆಗೆ ಜೆ.ಸಿ.ಮಾಧುಸ್ವಾಮಿ ತುಮಕೂರು ಜಿಲ್ಲಾ ಉಸ್ತುವಾರಿಯಾಗಿದ್ದರು. ಈಗ ಸಚಿವ ಅರಗ ಜ್ಞಾನೇಂದ್ರ ಅವರಿಗೆ ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿದೆ. ಮಾಧುಸ್ವಾಮಿ ಅವರಿಗೆ ಯಾವುದೇ ಜಿಲ್ಲಾ ಉಸ್ತುವಾರಿ ಇಲ್ಲದಂತೆ ಮಾಡಿದ್ದರಲ್ಲಿ ಬಸವಜ್ಯೋತಿ ಕೈವಾಡ ಇದೆಯೇ ಎಂಬುದು ಅಚ್ಚರಿ ಮೂಡಿಸಿದೆ.

ಕೆ.ಈ.ಸಿದ್ದಯ್ಯ,

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular