ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಬೇಕಾಗಿಲ್ಲ. ಹಿಂದೆ ಸಂಸ್ಕೃತ ಹೇರಿಕೆ ವಿರುದ್ಧ ಡಾ.ರಾಜಕುಮಾರ್ ನೇತೃತ್ವದಲ್ಲಿ ಗೋಕಾಕ್ ಚಳವಳಿ ನಡೆದಿತ್ತು. ಈಗ ಮತ್ತೆ ಅಂಥದ್ದೇ ಕಾಲ ಬಂದಿದೆ. ಹೀಗಾಗಿ ಸೋಮವಾರ ಎಲ್ಲರೂ ಸಂಸ್ಕೃತ ವಿವಿ ಬೇಡ ಹ್ಯಾಶ್ ಟ್ಯಾಗ್ ಗಳೊಂದಿಗೆ ಟ್ವೀಟ್ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕ ರಾಜ್ಯಧ್ಯಕ್ಷ ಟಿ.ಎ.ನಾರಾಯಣ ಗೌಡ ಮನವಿ ಮಾಡಿದ್ದಾರೆ.
ಕನ್ನಡಿಗರ ಮೇಲೆ ಪರನುಡಿ ಹೇರುವ ಇಂಥ ಯತ್ನವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ. ಸರ್ಕಾರ ಏನೇ ಬಲಪ್ರಯೋಗ ಮಾಡಿದರೂ ವಿಶ್ವವಿದ್ಯಾಲಯ ಆರಂಭಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಸ್ಕೃತ ವಿವಿ ಸ್ಥಾಪನೆ ಹಿಂದೆ ಕನ್ನಡ ನುಡಿಯನ್ನು ಹಿಂದಕ್ಕೆ ತಳ್ಳುವ ಯತ್ನ ನಡೆಯುತ್ತಿದೆ. ರಾಜ್ಯ ಸರ್ಕಾರದ ಈ ಧೋರಣೆ ಖಂಡಿಸಿ ಬೆಳಗ್ಗೆ 11 ಗಂಟೆಯಿಂದ ಇಡೀ ದಿನ ಟ್ವಿಟರ್ ಅಭಿಯಾನ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮೊದಲ ಹಂತದಲ್ಲಿ ಸಂಸ್ಕೃತ ವಿವಿ ಸ್ಥಾಪನೆಯ ಹುನ್ನಾರ ಬಯಲಿಗೆಳೆದು ಜನಜಾಗೃತಿ ನಡೆಸಲಾಗುವುದು. ನಂತರ ಬೀದಿಹೋರಾಟ ರೂಪಿಸಲಾಗುವುದು. ಸಂಸ್ಕೃತ ವಿವಿ ರದ್ದುಗೊಳಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ತಿಳಿಸಿದ್ದಾರೆ.
ಮಾಗಡಿ ಬಳಿ ಸಂಸ್ಕೃತ ವಿವಿಗೆ ನೂರು ಎಕರೆ ಜಾಗ ಮತ್ತು 359 ಕೋಟಿ ರೂಪಾಯಿ ನೀಡಲಾಗಿದೆ. ಜೊತೆಗೆ ಸಾವಿರಾರು ಕೋಟಿ ರೂಪಾಯಿ ನಮ್ಮ ಹಣವನ್ನು ಕೊಡುವ ಸಾಧ್ಯತೆ ಇದ್ದು, ಇದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕು ಎಂದು ಹೇಳಿದ್ದಾರೆ.
ಟ್ವಿಟ್ಟರ್ ಅಭಿಯಾನದಲ್ಲಿ ಎಲ್ಲ ಕನ್ನಡದ ಮನಸುಗಳೂ ಪಾಲ್ಗೊಳ್ಳಬೇಕು. ಇದು ದೊಡ್ಡ ಚಳವಳಿಯ ಸಣ್ಣ ಆರಂಭ ಮಾತ್ರ. ನಾವು ಸಾಗಬೇಕಾದ ಹಾದಿ ದೂರವಿದೆ. ಕನ್ನಡದ ಜನತೆ ಸಂಸ್ಕೃತಪ್ರಿಯರ ಹುನ್ನಾರಗಳನ್ನು ಅರಿತು ಹೋರಾಡಬೇಕಾದ ಅನಿವಾರ್ಯತೆ ಈಗ ಉಂಟಾಗಿದೆ ಎಂದಿದ್ದಾರೆ.
ಕನ್ನಡದ ಮಕ್ಕಳಿಗೆ ಕನ್ನಡದ ಬದಲು ಸಂಸ್ಕೃತ ಕಲಿಸುವ ಹುನ್ನಾರ ನಡೆಯುತ್ತಿದೆ. ಸಂಸ್ಕೃತ ಸಂಸ್ಥೆಗಳು, ಅಧ್ಯಾಪಕರು ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿರುವುದೇ ಇದಕ್ಕೆ ತಾಜಾ ಉದಾಹರಣೆ. ಈ ಸಂಚನ್ನು ವಿಫಲಗೊಳಿಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.