ಪಂಜಾಬ್ ನ ಲೂಧಿಯಾನದಲ್ಲಿ ನ್ಯಾಯಾಲಯದ ಸಂಕೀರ್ಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ಕಟ್ಟಡದ ಎರಡನೇ ಮಹಡಿಯಲ್ಲಿರುವ ಸ್ನಾನಗೃಹದಲ್ಲಿ ಮಧ್ಯಾಹ್ನ 12:22 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸ್ನಾನಗೃಹದ ಗೋಡೆಗಳಿಗೆ ಹಾನಿಯಾಗಿದೆ. ಹತ್ತಿರದ ಕೋಣೆಗಳ ಗಾಜುಗಳು ಪುಡಿಪುಡಿಯಾಗಿವೆ.
ಜಿಲ್ಲಾ ನ್ಯಾಯಾಲಯ ಲೂಧಿಯಾನ ನಗರದ ಹೃದಯಭಾಗದಲ್ಲಿದ್ದು, ಜಿಲ್ಲಾಧಿಕಾರಿಗಳ ಕಚೇರಿಯ ಸಮೀಪವಿದೆ. ಸ್ಫೋಟ ಸಂಭವಿಸಿದಾಗ ಜಿಲ್ಲಾ ನ್ಯಾಯಾಲಯದಲ್ಲಿ ಕಲಾಪಗಳು ನಡೆಯುತ್ತಿದ್ದವು. ಈ ಸಂದರ್ಭದದಲ್ಲಿ ಸ್ಫೋಟ ಸಂಭವಿಸಿದೆ.
ಎರಡನೇ ಮಹಡಿಯಲ್ಲಿರುವ ಸಾರ್ವಜನಿಕ ವಾಶ್ ರೂಂನಲ್ಲಿ ಸ್ಫೋಟ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ವಕೀಲರೊಬ್ಬರು ಹೇಳಿದರೆಂದು ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದೆ.
ಲೂಧಿಯಾನ ಪೊಲೀಸ್ ಕಮಿಷನರ್ ಗುರುಪ್ರೀತ್ ಸಿಂಗ್ ಭುಲ್ಲರ್, ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಪೊಲೀಸರು ಸ್ಥಳವನ್ನು ಸುತ್ತುವರಿದಿದ್ದಾರೆ. ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ತೆರಳಿವೆ. ಜಿಲ್ಲಾ ಆಡಳಿತ ಸಂಕೀರ್ಣ ಮತ್ತು ಪಕ್ಕದ ಡಿಸಿ ಕಚೇರಿ ಸಂಕೀರ್ಣದಲ್ಲಿರುವ ಸರ್ಕಾರಿ ಕಚೇರಿಗಳನ್ನು ತೆರವು ಮಾಡಲಾಗಿದೆ ಎಂದು ಹೇಳಿದ್ದಾರೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟ್ವಿಟರ್ ಮಾಡಿ, ಘಟನೆಯ ಕುರಿತು ಕೂಲಂಕಷ ತನಿಖೆ ಮಾಡುವಂತೆ ಪಂಜಾಬ್ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಿಂದ ರಾಜ್ಯಕ್ಕೆ ಬೆದರಿಕೆ ಇತ್ತು ಎಂದು ಕಳವಳ ವ್ಯಕ್ತಪಡಿಸಿದ್ದರು.
ರಾಷ್ಟ್ರೀಯ ತನಿಖಾ ಸಂಸ್ಥೆ ತಂಡ ಚಂಡೀಗಢದಿಂದ ತೆರಳಿದ್ದು ನ್ಯಾಯಾಲಯ ಆವರಣಕ್ಕೆ ತಲುಪುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಚರಂಜಿತ್ ಸಿಂಗ್ ಕೂಡ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.