Thursday, June 13, 2024
Google search engine
Homeಚಳುವಳಿಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ - ಕೃಷಿ ಕಾಯ್ದೆಗಳ ರದ್ದತಿಗೆ ತೀರ್ಮಾನ - ವಿಶ್ಲೇಷಣೆ

ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ – ಕೃಷಿ ಕಾಯ್ದೆಗಳ ರದ್ದತಿಗೆ ತೀರ್ಮಾನ – ವಿಶ್ಲೇಷಣೆ

ದೇಶದಲ್ಲಿ ಮುಂದಿನ ವರ್ಷ ಐದು ರಾಜ್ಯಗಳ ವಿಧಾನಸಭೆಗಳ ಚುನಾವಣೆ ನಡೆಯಲಿದ್ದು ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಗೆಲ್ಲುವುದು ಖಚಿತವಾದರೂ ತುಂಬಾ ಕಷ್ಟಪಡಬೇಕಾಗುತ್ತದೆ ಎಂಬ ಮುನ್ಸೂಚನೆ ನೀಡಿದ ಬೆನ್ನಿಗೇ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ರೈತರ ಪ್ರತಿಭಟನೆಗೆ ಹೆದರಿರುವ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮುಖಂಡರು ಚುನಾವಣೆಗಳಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಬಗ್ಗೆ ಎಚ್ಚೆತ್ತುಕೊಂಡಿದೆ. ಬಿಜೆಪಿಯ ವರುಣ್ ಗಾಂಧಿ ಸೇರಿ ಕೆಲವರು ರೈತರ ಹೋರಾಟದ ಪರ ನಿಂತರು. ಇದು ಕೂಡ ಬಿಜೆಪಿಗೆ ಹಿನ್ನಡೆಯಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಎದುರಿಸಬೇಕಾಯಿತು. ಟಿಎಂಸಿಯಿಂದ ಬಿಜೆಪಿ ಸೇರ್ಪಡೆಯಾಗಿ ಶಾಸಕರಾಗಿ ಆಯ್ಕೆಯಾದ ಎಂಟಕ್ಕೂ ಹೆಚ್ಚು ಮಂದಿ ಶಾಸಕರು ಟಿಎಂಸಿಗೆ ಘರ್ ವಾಪ್ಸಿಯಾದರು. ಬಂಗಾಳದಲ್ಲಿ ಟಿಎಂಸಿ ಬಲಿಷ್ಟವಾಯಿತು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತು ದಿನಬಳಕೆ ವಸ್ತುಗಳ ಬೆಲೆ ಗನನಮುಖಿಯಾಗಿದ್ದು, ಜನರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಪರಿಣಾಮ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನಿವಾರ್ಯವಾಗಿ ಪೆಟ್ರೋಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತು. ಇದು ಕೂಡ ರೈತರ ಹೋರಾಟಕ್ಕೆ ಸಿಕ್ಕ ಜಯ.

ಕಳೆದ ಒಂದು ವರ್ಷದಿಂದಲೂ ದೆಹಲಿಯ ಸಿಂಘು, ಟಿಕ್ರಿ ಗಡಿಗಳಲ್ಲಿ ನವೆಂಬರ್ 26, 2020ರಿಂದ ಮೊಕ್ಕಾಂ ಹೂಡಿ ಕೊರೆಯುವ ಚಳಿಯಲ್ಲೂ, ಸುರಿಯುವ ಮಳೆಯನ್ನೂ, ಬಿಸಿಲನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಸತತ ಒಂದು ವರ್ಷ ಕಳೆದರು ಹೋರಾಟ ನಿರತ ರೈತರು ತಮ್ಮ ಪಟ್ಟನ್ನು ಸಡಿಲಿಸದೆ ಕೃಷಿ ಕಾಯ್ದೆಗಳ ರದ್ದತಿಯೊಂದಿಗೆ ಮನೆಗೆ ಮರಳುವ ಶಪಥ ಮಾಡಿದ್ದರು.

ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ದೊಡ್ಡ ಮಟ್ಟದ ಹೋರಾಟಗಳು ನಡೆದವು. ಹೆದ್ದಾರಿ ಬಂದ್ ಮಾಡಲಾಯಿತು. ಧರಣಿ, ಹರತಾಳ, ಭಾರತ್ ಬಂದ್, ಕೆಂಪುಕೋಟೆಗೆ ಟ್ರ್ಯಾಕ್ಟರ್ ಗಳ ಮುತ್ತಿಗೆ ಹೀಗೆ ನಾನಾ ಬಗೆಯ ಹೋರಾಟಗಳ ಮೂಲಕ ಒಕ್ಕೂಟ ಸರ್ಕಾರದ ಮೇಲೆ ಒತ್ತಡ ತರಲಾಯಿತು.

ಕೇಂದ್ರ ಸರ್ಕಾರ ಕೃಷಿ ಸಚಿವರ ನೇತೃತ್ವದಲ್ಲಿ ನಾಲ್ಕು ಬಾರಿ ನಡೆಸಿದ ಸಂಧಾನಸಭೆ ವಿಫಲವಾಯಿತು. ಈ ನಡುವೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಎಸ್.ಯುವಿ ವಾಹನ ಹರಿಸಿ ನಾಲ್ವರು ರೈತರು ಸೇರಿ ಎಂಟು ಮಂದಿ ಹತ್ಯೆ ಮಾಡಲಾಯಿತು. ಈ ಹತ್ಯೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರ ಪುತ್ರ ಅಶಿಶ್ ಪಾತ್ರ ಪ್ರಮುಖವಾಗಿತ್ತು ಎಂಬುದು ತನಿಖೆಯಿಂದ ದೃಢಪಟ್ಟಿದೆ.

ಈ ಸಂಬಂಧ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಮೂರು ಬಾರಿ ಛೀಮಾರಿ ಹಾಕಿ ತರಾಟೆಗೆ ತೆಗೆದುಕೊಂಡಿತು. ಕೊನೆಗೆ ರೈತರ ಹತ್ಯಾ ಪ್ರಕರಣದ ತನಿಖೆಯನ್ನು ಹರ್ಯಾಣ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೈನ್ ಉಸ್ತುವಾರಿಯಲ್ಲಿ ಎಸ್.ಐ.ಟಿ ನಡೆಸಬೇಕೆಂದು ಸುಪ್ರೀಂಕೋರ್ಟ್ ಹೇಳಿತು.

ಜನಪರ ಚಿಂತಕ ಕೆ.ದೊರೈರಾಜ್ ದಿ ನ್ಯೂಸ್ ಕಿಟ್ ಜೊತೆ ಮಾತನಾಡಿ, ಇದು ಹೋರಾಟಕ್ಕೆ ಸಂದ ಜಯ. ರೈತರ ಹೋರಾಟಕ್ಕೆ ಬೆಂಬಲಿಸಿದ ಎಲ್ಲರಿಗೂ ಇದರಿಂದ ಸಂತೋಷವಾಗಿದೆ. ಪ್ರಜಾಪ್ರಭುತ್ವ ಮೌಲ್ಯಗಳು ಎಲ್ಲಿಯವರೆಗೆ ಜೀವಂತವಾರಗಿರುತ್ತವೋ ಅಲ್ಲಿಯವರೆಗೆ ಸರ್ವಾಧಿಕಾರಿ ಧೋರಣೆ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ. ಇದು ಜನ ವಿರೋಧಿ ಕಾಯ್ದೆಗಳನ್ನು ತರುವವರಿಗೆ ಎಚ್ಚರಿಕೆಯ ಸಂದೇಶವಾಗಿದೆ. ಸ್ವಾತಂತ್ರ್ಯ ನಂತರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೀರ್ಘ ಕಾಲ ಹೋರಾಟ ನಡೆದಿರುವುದು ಐತಿಹಾಸಿಕ ಹೆಜ್ಜೆಯಾಗಿದೆ ಎಂದರು.

ಇದೆಲ್ಲದರ ನಡುವೆ ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್, ಗೋವಾ ಸೇರಿ ಐದು ರಾಜ್ಯಗಳ ಚುನಾವಣೆ ನಡೆಯಲಿದ್ದು ಸಮೀಕ್ಷೆಗಳು ಬಿಜೆಪಿ ವಿರುದ್ಧವಾಗಿ ಬಂದ ಮೇಲೆ ಇದೀಗ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದ್ದು ರೈತರ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗಿದೆ.

ಕೆ.ಈ.ಸಿದ್ದಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments